ಬೆಂಗಳೂರು: ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಇಂದು ತಮ್ಮ ಅನುಯಾಯಿಗಳನ್ನ ಅಗಲಿ ಲಿಂಗೈಕ್ಯರಾಗಿದ್ದು, ನಾಡಿದ್ದು ಕೂಡಲಸಂಗಮದಲ್ಲಿ ಅಂತಿಮ ವಿಧಿ ವಿಧಾನ ನೆರವೇರಲಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಬಳಿಕ ಆಸ್ಪತ್ರೆ ಮುಂದೆ ಮಾಧ್ಯಮಗಳೊಂದಿಗೆ ಮಾತನಾಡಿದ ಪಾಟೀಲ್, ಮಾತೆ ಮಹಾದೇವಿಯರ ಲಿಂಗೈಕ್ಯ ದುಃಖಕರ ಸಂಗತಿಯಾಗಿದೆ. ಲಕ್ಷಾಂತರ ಭಕ್ತಗಣವನ್ನ ಅಗಲಿರುವುದು ತುಂಬಲಾರದ ನಷ್ಟ. ಅವರ ಅಂತಿಮ ದರ್ಶನಕ್ಕೆ ನಾಳೆ ಬೆಳಿಗ್ಗೆ 10 ಗಂಟೆಯವರೆಗೂ ರಾಜಾಜಿನಗರದಲ್ಲಿರುವ ಬಸವ ಮಂಟಪದಲ್ಲಿ ವ್ಯವಸ್ಥೆ ಮಾಡಲಾಗಿದೆ. ತದನಂತರ ಅಲ್ಲಿಂದ ಹೊರಟು ಚಿತ್ರದುರ್ಗದಲ್ಲಿ ಒಂದು ಗಂಟೆಗಳ ಕಾಲ ಅವರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಬಳಿಕ ಕೂಡಲಸಂಗಮಕ್ಕೆ ಕೊಂಡಯ್ಯಲಾಗುವುದು.
ಶನಿವಾರ ಮಧ್ಯಾಹ್ನ 1 ಗಂಟೆಯವರೆಗೂ ಅಂತಿಮ ನಮನಕ್ಕೆ ವ್ಯವಸ್ಥೆ ಕಲ್ಪಿಸಿ ಬಸವಧರ್ಮದ ವಿಧಿವಿಧಾನಗಳಂತೆ ಮೂಲಕ ಅಂತ್ಯಕ್ರಿಯೆ ನೆರವೇರಲಿದೆ ಎಂದರು. ಇದೆ ವೇಳೆ ಸಕಲ ಸರ್ಕಾರಿ ಗೌರವ ಸಲ್ಲಿಕೆ ಮಾಡಬೇಕೆ ಬೇಡವೆ ಎಂಬ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಂಗಮ ದೀಕ್ಷೆ ಪಡೆದು 51 ವರ್ಷಗಳ ಕಾಲ ವಚನಗಳು, ಬಸವ ಧರ್ಮವನ್ನ ಪಾಲಿಸಿ, ಎಲ್ಲರಿಗೂ ಪ್ರವಚನಗಳನ್ನ ನೀಡುವುದರ ಜೊತೆಗೆ ಐತಿಹಾಸಿಕ ಸಂಗಮಗಳನ್ನ ಸ್ಥಾಪನೆ ಮಾಡಿದ್ದಾರೆ. ಸಾರ್ಥಕ ಬದುಕಿನೊಂದಿಗೆ ಅವರು ಇಲ್ಲಿವರೆಗೆ ಜೀವನ ಕಳೆದಿದ್ದು, ಬಸವ ಧರ್ಮಕ್ಕೆ ಅವರ ಕೊಡುಗೆ ಬಹು ದೊಡ್ಡದು. ಅವರ ಅಗಲಿಕೆಯಿಂದ ಅಸಂಖ್ಯಾತ ಬಸವ ಭಕ್ತರಿಗೆ ನೋವುಂಟಾಗಿದೆ ಎಂದರು.