ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ಮಾಸ್ಕ್ ಕಡ್ಡಾಯಗೊಳಿಸುವ ವಿಚಾರವು ಸರ್ಕಾರದ ಪರಿಶೀಲನೆಯಲ್ಲಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಪ್ರತಿ ದಿನ 2 ರಿಂದ 3 ಸಾವಿರ ಮಂದಿಗೆ ಕೋವಿಡ್ ಟೆಸ್ಟ್ ನಡೆಯುತ್ತಿತ್ತು . ಈಗ 4 ರಿಂದ 5 ಸಾವಿರ ಕೋವಿಡ್ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು. ನಮ್ಮಲ್ಲಿ ಪಾಸಿಟಿವ್ ರೇಟ್ ಕಡಿಮೆ ಇದೆ. ಆತಂಕ ಪಡುವಂತಹ ಸ್ಥಿತಿ ಬೆಂಗಳೂರಿನಲ್ಲಿ ಇಲ್ಲ. ಎಲ್ಲವನ್ನೂ ಕ್ಷಣ ಕ್ಷಣಕ್ಕೂ ಅವಲೋಕಿಸುತ್ತಿದ್ದೇವೆ. ಜನರ ಆರೋಗ್ಯ ದೃಷ್ಟಿಯಿಂದ ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತೇವೆ.
ಕೋವಿಡ್ ತಡೆಗೆ ಯಾವ ರೀತಿ ಮಾರ್ಗಸೂಚಿ ಮಾಡಬೇಕೆಂಬುದನ್ನು ಸಮಾಲೋಚಿಸುತ್ತಿದ್ದೇವೆ. ಸೋಮವಾರದಿಂದ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಸೂಚಿಸಲಾಗಿದೆ. ಈಗಾಗಲೇ ಮಾಸ್ಕ್ ನ್ನು ವಿಧಾನಸೌಧದಲ್ಲಿ ಇಡಲಾಗಿದೆ ಎಂದು ಹೇಳಿದರು.
ಹತ್ತು ಲಕ್ಷ ಡೋಸ್ ಇದೆ: ಮೂರನೇ ಡೋಸ್ ತೆಗೆದುಕೊಂಡಿಲ್ಲ. ಆದರೂ, ನಾವು ಹೆಚ್ಚು ಡೋಸ್ ನ್ನು ಕೇಂದ್ರಕ್ಕೆ ಕೇಳಿಲ್ಲ. ಬಹಳಷ್ಟು ದಾಸ್ತಾನು ಮಾಡಿಲ್ಲ. ಈಗಲೂ ಹತ್ತು ಲಕ್ಷ ಡೋಸ್ ಇದೆ ಎಂದ ಸಚಿವರು, ಆದರೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಎಲ್ಲರನ್ನೂ ಗಮನಿಸುತ್ತಿದ್ದೇವೆ. ಎಲ್ಲವನ್ನೂ ಅವಲೋಕಿಸುತ್ತೇವೆ. ಅಗತ್ಯ ಬಿದ್ದರೆ ಸಭೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಕೋವಿಡ್ ವಿಚಾರದಲ್ಲಿ ಪ್ರಧಾನಮಂತ್ರಿ ಸೂಚಿಸಿದಂತೆ ಕ್ರಮ ಕೈಗೊಳ್ಳಲಾಗಿದೆ: ಸಿಎಂ ಬೊಮ್ಮಾಯಿ