ಬೆಂಗಳೂರು : ಮದುವೆ ಸೇರಿ ಎಲ್ಲಾ ರೀತಿಯ ಸಭೆ-ಸಮಾರಂಭಗಳಿಗೆ ಮಾರ್ಷಲ್‌ಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಕೋವಿಡ್ ಎರಡನೇ ಅಲೆ, ಲಸಿಕೆ ಸಂಬಂಧ ಎಲ್ಲಾ ಡಿಸಿಗಳ ಜೊತೆ ವಿಡಿಯೋ ಸಂವಾದ ನಡೆಸಿ ಬಳಿಕ ಮಾತನಾಡಿದ ಅವರು, ಮದುವೆ ಹಾಗೂ ಎಲ್ಲಾ ರೀತಿಯ ಸಮಾರಂಭಗಳಲ್ಲಿ ಮಾರ್ಷಲ್‌ಗಳನ್ನು ನಿಯೋಜಿಸಲಾಗುತ್ತದೆ. ಈ ಮಾರ್ಷಲ್ಗಳು ಸಾಮಾಜಿಕ ಅಂತರ, ಮಾಸ್ಕ್ ಧರಿಸುವ ಬಗ್ಗೆ ತಪಾಸಣೆ ಮಾಡಲಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಪ್ರಕಾರ ದಂಡ ಸೇರಿ ಇತರ ಕ್ರಮ ಕೈಗೊಳ್ಳಲಿದ್ದಾರೆ.
ಅದೇ ರೀತಿ ಹೋಟೆಲ್, ಡಾಬಾ, ರೆಸ್ಟೋರೆಂಟ್ ಹಾಗೂ ಅಡುಗೆ ಮಾಡುವವರು ಸೇರಿ ಎಲ್ಲಾ ಆಹಾರ ತಯಾರಿಕೆ ಮಾಡುವವರು ಮೇಲೆ ನಿಗಾ ಇಡುವಂತೆ ತಿಳಿಸಲಾಗಿದೆ. ಅವರಿಗೂ ಟೆಸ್ಟಿಂಗ್ ಮಾಡಿಸುವಂತೆ ಆರೋಗ್ಯ ಇಲಾಖೆ ನಿರ್ದೇಶಿಸಿದೆ. ಸಭೆ-ಸಮಾರಂಭಗಳು ತಾಂತ್ರಿಕ ಸಲಹಾ ಸಮಿತಿ ಮಾರ್ಗಸೂಚಿ ವಿರುದ್ಧ ನಡೀತಿವೆ. ಮತ್ತೆ ಸೋಂಕು ಹೆಚ್ಚಾದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ.
ಪಕ್ಕದ ರಾಜ್ಯದಲ್ಲಿ ಲಾಕ್ಡೌನ್ ಆಗುತ್ತಿದೆ. ನಮ್ಮ ರಾಜ್ಯದಲ್ಲಿ ಅದು ಆಗಬೇಕಾ ಯೋಚನೆ ಮಾಡಿ. ಸಿಎಂ ಕೂಡ ಮುಂದಿನ ವಾರ ಎಲ್ಲಾ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಅಂತಾರಾಜ್ಯ ಪ್ರಯಾಣಕ್ಕೆ ನಾವು ನಿರ್ಬಂಧ ಹಾಕಿಲ್ಲ. ಕೇವಲ RTPCR ಪರೀಕ್ಷೆಯನ್ನು ಮಾತ್ರ ಕಡ್ಡಾಯ ಮಾಡಿದ್ದೇವೆ. 5 ಜನರಿಗೆ ಒಂದೇ ಕಡೆ ಪಾಸಿಟಿವ್ ಬಂದರೆ ಕಂಟೇನ್ಮೆಂಟ್ ಜೋನ್ ಮಾಡಲು ಆದೇಶಿಸಿದ್ದೇವೆ.
ಕೇರಳ,ಮಹಾರಾಷ್ಟ್ರ ಆರೋಗ್ಯ ಮಂತ್ರಿಗಳ ಜೊತೆ ಸಭೆ ನಡೆಸಿ, ಅಲ್ಲಿಂದ ಬರುವ ಜನರಿಗೆ ಮಾರ್ಗಸೂಚಿ ಪ್ರಕಟ ಮಾಡಿ ಎಂದು ಮನವಿ ಮಾಡುತ್ತೇವೆ. ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಅವಕಾಶ ಸಂಬಂಧ ಪ್ರತಿಕ್ರಿಯಿಸಿದ ಅವರು, ತಿಂಗಳ ಬಳಿಕ ನಿರ್ಧಾರದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಿಂದೆ ನಡೆದ ಚಿತ್ರರಂಗದ ಪ್ರತಿನಿಧಿಗಳ ಸಭೆಯಲ್ಲೇ ಈ ವಿಚಾರ ತಿಳಿಸಲಾಗಿದೆ ಎಂದರು.
ಲಸಿಕಾ ಅಭಿಯಾನದಲ್ಲಿ ಕಂದಾಯ, ಗೃಹ, ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿ ಸೇರಿ 2.90 ಲಕ್ಷ ಜನ ಇದ್ದಾರೆ. ಈಗಾಗಲೇ 1.11 ಲಕ್ಷ ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆ. 4,24,573 ಆರೋಗ್ಯ ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆ. 1,20,176 ಫ್ರಂಟ್‌ಲೈನ್ ಸಿಬ್ಬಂದಿಗೆ ಲಸಿಕೆ ಹಾಕಲಾಗಿದೆ. ನಾಳೆ, ನಾಡಿದ್ದು ಲಸಿಕೆ ಪಡೆಯಲು ಹೆಚ್ಚಿನ ಅವಕಾಶ ನೀಡಿದ್ದೇವೆ. ಬೆಂಗಳೂರು ನಗರ, ಬಾಗಲಕೋಟೆ, ಧಾರವಾಡದಲ್ಲಿ ಶೇ.50ಕ್ಕಿಂತ ಕಡಿಮೆ ಫ್ರಂಟ್‌ಲೈನ್ ವಾರಿಯರ್ಸ್ಲ ಲಸಿಕೆ ತೆಗೆದುಕೊಂಡಿದ್ದಾರೆ.
ಶೇ.70ಕ್ಕಿಂತ ಹೆಚ್ಚು ಲಸಿಕೆ ಪಡೆದ ಜಿಲ್ಲೆ ಗದಗ, ತುಮಕೂರು. ಬಾಗಲಕೋಟೆ (23%) ಬೆಂಗಳೂರು( 24%) ಕಡಿಮೆ ಪ್ರಮಾಣದಲ್ಲಿ ಲಸಿಕೆ ಪಡೆದಿದ್ದಾರೆ. ಬೆಂಗಳೂರು ನಗರ (1.2%) ಕಲಬುರಗಿ (1.37%), ಪಾಸಿಟಿವ್, ದ.ಕನ್ನಡ (1.4%) ಮೂರು ಜಿಲ್ಲೆಗಳಲ್ಲಿ ಪಾಸಿಟಿವ್ ಹೆಚ್ಚಳ ಆಗಿದೆ. ಈ ಜಿಲ್ಲೆಗಳಲ್ಲಿ ಆರ್ಟಿಪಿಸಿಆರ್ ಟೆಸ್ಟಿಂಗ್ ಹೆಚ್ಚಳ ಮಾಡಲು ಸೂಚನೆ ನೀಡಲಾಗಿದೆ ಎಂದರು.