ಬೆಂಗಳೂರು : ನಗರದ ಮತ್ತಿಕೆರೆಯಲ್ಲಿರುವ ಜಯಪ್ರಕಾಶ್ ನಾರಾಯಣ ಉದ್ಯಾನದಲ್ಲಿ (ಜೆಪಿ ಪಾರ್ಕ್) ಮಾರುಕಟ್ಟೆ ಕಟ್ಟಡ ನಿರ್ಮಾಣ ಮಾಡುತ್ತಿರುವ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್ ಜಾಗದ ಸರ್ವೇ ಮಾಡಿ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿದೆ.
ಜೆಪಿಪಾರ್ಕ್ ಉದ್ಯಾನ ಜಾಗದಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಫ್ಯೂಚರ್ ಇಂಡಿಯಾ ಆರ್ಗನೈಸೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಇದೇ ಜುಲೈ 28ರಂದು ಬಿಬಿಎಂಪಿ ಜಾಗದ ಸರ್ವೇ ನಡೆಸಬೇಕು. ಸರ್ವೇ ನಡೆಸುವಾಗ ಅರ್ಜಿದಾರರು ಹಾಜರಿರಬೇಕು. ಒಂದೊಮ್ಮೆ ಅರ್ಜಿದಾರರು ಹಾಜರಾಗದಿದ್ದರೂ ಸರ್ವೇ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ
ನಗರದ 3ನೇ ಅತಿದೊಡ್ಡ ಉದ್ಯಾನವಾದ ಜಯಪ್ರಕಾಶ್ ನಾರಾಯಣ ಪಾರ್ಕ್ಗೆ ಸೇರಿದ ಆಟದ ಮೈದಾನದಲ್ಲಿ ಮಾರುಕಟ್ಟೆ ಕಟ್ಟಡ ನಿರ್ಮಿಸಲಾಗುತ್ತಿದೆ. ಇದರಿಂದ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಇದನ್ನು ಅಲ್ಲಗೆಳೆದಿರುವ ಬಿಬಿಎಂಪಿ, ಮಾರುಕಟ್ಟೆ ಕಟ್ಟಡವನ್ನು ಜೆಪಿ ಪಾರ್ಕ್ ಜಾಗದಲ್ಲಿ ನಿರ್ಮಿಸುತ್ತಿಲ್ಲ. ಉದ್ಯಾನದಿಂದ 300 ಮೀಟರ್ ದೂರದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ.
ಜತೆಗೆ, ಪಾರ್ಕ್ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗಿದೆ ಎಂದು ಸಮರ್ಥನೆ ನೀಡಿದೆ. ಆದರೆ, ಪಾಲಿಕೆ ಟೆಂಡರ್ನಲ್ಲಿ ಕಾಮಗಾರಿ ನಡೆಸುತ್ತಿರುವ ಜಾಗವನ್ನು ಜೆಪಿ ಪಾರ್ಕ್ ಎಂದು ನಮೂದಿಸಿದೆ. ಇದನ್ನು ಗಮನಿಸಿದ ಪೀಠ, ಕಟ್ಟಡ ನಿರ್ಮಾಣ ಕಾಮಗಾರಿಗೆ 2020ರ ಅಕ್ಟೋಬರ್ನಲ್ಲಿ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಲ್ಲದೆ, ಮಾರುಕಟ್ಟೆ ಕಟ್ಟಡವು ಪಾರ್ಕ್‌ನಲ್ಲಿದೆಯೇ ಅಥವಾ ಪಾರ್ಕ್ನಿಂದ ಎಷ್ಟು ದೂರದಲ್ಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿಯಬೇಕಿದೆ.
ಹೀಗಾಗಿ, ಉದ್ಯಾನ ಮತ್ತು ಮಾರುಕಟ್ಟೆಯ ಜಾಗವನ್ನು ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಈ ಹಿಂದೆ ಸೂಚಿಸಿತ್ತು. ಆದರೆ, ಪಾಲಿಕೆ ಅರ್ಜಿದಾರರ ಸಮ್ಮುಖದಲ್ಲಿ ಸರ್ವೇ ನಡೆಸಿಲ್ಲ. ಆದ್ದರಿಂದ ಜುಲೈ 28ರಂದು ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಸೂಚಿಸಿದೆ.