ಬೆಂಗಳೂರು: ಹಳೆ ಹುಬ್ಬಳ್ಳಿಯ ಅಂಬೇಡ್ಕರ್ ಆಟದ ಮೈದಾನದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಿಸುತ್ತಿರುವ ಮಾರುಕಟ್ಟೆಯ ಕಾಮಗಾರಿ ಮುಂದುವರಿಸದಂತೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಹೈಕೋರ್ಟ್ ಮಧ್ಯಂತರ ನಿರ್ದೇಶನ ನೀಡಿದೆ.
ಈ ಕುರಿತು ಸ್ಥಳೀಯ ನಿವಾಸಿಗಳಾದ ನವೀನ್ ಪ್ರಭು ನವಲೂರು ಹಾಗೂ ಬಶೀರ್ ಅಹ್ಮದ್ ಜಿ ಸವಣೂರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ಅರ್ಜಿದಾರರ ಪರ ವಕೀಲರು ವಾದ ಆಲಿಸಿದ ಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಧಾರವಾಡ ಜಿಲ್ಲಾಧಿಕಾರಿ, ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಬಾಲಕೃಷ್ಣ ಶಾಸ್ತ್ರಿ ವಾದ ಮಂಡಿಸಿ, ಹಳೆ ಹುಬ್ಬಳ್ಳಿಯ ಹೆಗ್ಗೇರಿ ಪ್ರದೇಶದಲ್ಲಿ ಕಳೆದ ಹದಿನೈದು ವರ್ಷಗಳಿಂದ ಡಾ. ಬಿ ಆರ್ ಅಂಬೇಡ್ಕರ್ ಆಟದ ಮೈದಾನ ಅಸ್ತಿತ್ವದಲ್ಲಿದೆ. ಆದರೆ, ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆ ಅಡಿ ಮೈದಾನದಲ್ಲಿ ವ್ಯಾಪಾರಿಗಳಿಗೆ ಮಾರುಕಟ್ಟೆ ನಿರ್ಮಿಸಲಾಗುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿ ಪಾಲಿಕೆ ಆಯುಕ್ತರು ಸೇರಿದಂತೆ ಸಂಬಂಧಿಸಿದವರಿಗೆಲ್ಲ ಮನವಿ ಸಲ್ಲಿಸಿದ್ದರೂ , ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.