ಬೆಂಗಳೂರು: ಮಂಡ್ಯದ ವೈದ್ಯಕೀಯ ಕಾಲೇಜಿನಲ್ಲಿ ಕೊರತೆ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮನವಿ ಮಾಡಿದ್ದಾರೆ.
ಕಾಲೇಜಿನಲ್ಲಿ 16 ವಿಭಾಗಕ್ಕೆ ಅನುಮತಿ ಸಿಕ್ಕಿದೆ. 10 ವಿಭಾಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. 7 ವಿಭಾಗಗಳಿಗೆ 14 ಶಿಕ್ಷಕ ಸಿಬ್ಬಂದಿ ನೀಡಬೇಕು. ಸ್ನಾತಕೋತ್ತರ ಪದವಿ ತರಗತಿ ನಡೆಸಲು ಸಾಧ್ಯವಿಲ್ಲ, ನಿಲ್ಲಿಸಬೇಕೆಂದು ಸೂಚಿಸಿದೆ. 85 ವಿದ್ಯಾರ್ಥಿಗಳು ಈ ಸರ್ಕಾರದ ನೀಡಿದ ಪರವಾನಗಿ ಹಿನ್ನೆಲೆ ಪ್ರವೇಶ ಪಡೆದು ಪಿಜಿ ತರಗತಿ ನಡೆಯುತ್ತಿದೆ. ಈಗ ಪಿಜಿ ತರಬೇತಿ ಪಡೆಯುತ್ತಿರುವವರ ವಿದ್ಯಾರ್ಥಿಗಳ ಪರಿಸ್ಥಿತಿ ಏನು? 85 ವಿದ್ಯಾರ್ಥಿಗಳು ಪಿಜಿ ಪದವಿ ಮುಗಿಸಿದ್ದರೂ, ಎಂಸಿಎ ಅನುಮತಿ ಕೊಡಲ್ಲ. ಏಳು ವಿಭಾಗದ 14 ಹುದ್ದೆ ತುಂಬಲು ಮಂಜೂರಾತಿ ನೀಡಬೇಕು. ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ. ಸರ್ಕಾರ ಹುದ್ದೆಗಳನ್ನ ಭರ್ತಿ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಸರ್ಕಾರದ ಪರವಾಗಿ ಉತ್ತರಿಸಿದ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಈ ಹುದ್ದೆ ನೇಮಕವನ್ನು ಆದಷ್ಟು ಶೀಘ್ರವಾಗಿ ಮಾಡುತ್ತೇವೆ. ಅಲ್ಲಿನ ಪರಿಸ್ಥಿತಿಯ ಅರಿವಿದೆ. ನೇಮಕ ಪ್ರಕ್ರಿಯೆ ನಡೆಸುತ್ತೇವೆ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮರಿತಿಬ್ಬೇಗೌಡರು, ಸಚಿವರ ಉತ್ತರ ಸಮಾಧಾನ ತಂದಿಲ್ಲ. ಹಾಸ್ಯಾಸ್ಪದ ಅನ್ನಿಸುತ್ತಿದೆ. ಎಂಸಿಎ ಅಧಿಕಾರಿಗಳು ಆಗಮಿಸಲಿದ್ದು, ಯಾವುದೇ ಸಂದರ್ಭ ಪರಿಶೀಲನೆಗೆ ಬರಬಹುದು. ಕೋವಿಡ್ ಹಿನ್ನೆಲೆ ಅವರಿನ್ನೂ ಬಂದಿಲ್ಲ. ವಿಳಂಬವಾದರೆ ಕಷ್ಟ ಎಂದರು.
ಅವಕಾಶ ಪಡೆದ ಸದಸ್ಯರು: ನನಗೆ ಕಳೆದ ನಾಲ್ಕು ದಿನದಲ್ಲಿ ಐದು ಸಾರಿ ಅವಕಾಶ ವಂಚಿಸಲಾಗಿದೆ. ಮಾತಿಗೆ ಕರೆದು, ಯಾವುದೋ ಕಾರಣಕ್ಕೆ ಅವಕಾಶ ವಂಚನೆ ಆಗುತ್ತಿದೆ. ನನ್ನ ವಿಚಾರ ಅತ್ಯಂತ ಪ್ರಮುಖವಾದದ್ದು, 330 ರ ಅಡಿ ಚರ್ಚೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಕೊನೆಗೂ ಅವಕಾಶ ಸಿಕ್ಕಿದ್ದರಿಂದ ಸುದೀರ್ಘ ಚರ್ಚೆ ನಡೆಸಿದರು.
ಮರಿತಿಬ್ಬೇಗೌಡರ ಪ್ರಸ್ತಾಪದ ಮೇಲೆ ಜೆಡಿಎಸ್ ಸದಸ್ಯ ಅಪ್ಪಾಜಿಗೌಡ ಮಾತನಾಡಿದರು. ಇದಾದ ಬಳಿಕ ಸಭಾಪತಿಗಳು ಮಾತನಾಡಲು ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರಿಗೆ ಅವಕಾಶ ನೀಡಿದ ವೇಳೆ ಮಧ್ಯಪ್ರವೇಶಿಸಿದ ಆಡಳಿತ ಪಕ್ಷ ಸದಸ್ಯರು, ಇನ್ನಷ್ಟು ಪ್ರಮುಖ ವಿಧೇಯಕಗಳ ಮಂಡನೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭ ಉಂಟಾದ ಗದ್ದಲದ ಹಿನ್ನೆಲೆ ಸಭಾಪತಿಗಳು ಕಲಾಪವನ್ನು ಐದು ನಿಮಿಷ ಮುಂದೂಡಬೇಕಾಯಿತು.