ಬೆಂಗಳೂರು: ರಾಜ್ಯದಲ್ಲಿ ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಲು ಖಾಕಿ ಪಣ ತೊಟ್ಟಿದ್ದರೂ, ಹೊರ ರಾಜ್ಯದಿಂದ ಬೆಂಗಳೂರಿಗೆ ಗಾಂಜಾ ಎಗ್ಗಿಲ್ಲದೇ ಸರಬರಾಜಾಗುತ್ತಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ಗಸ್ತಿನಲ್ಲಿದ್ದಾಗ ಗಾಂಜಾ ಸೇವಿಸುತ್ತಿದ್ದ ಓರ್ವನನ್ನ ಬಂಧಿಸಿದ್ದರು. ಆತನ ವಿಚಾರಣೆ ನಡೆಸಿದಾಗ ಗಾಂಜಾ ಪೆಡ್ಲರ್ ಒಬ್ಬನ ಹೆಸರನ್ನ ಬಾಯ್ಬಿಟ್ಟಿದ್ದಾನೆ.
ಆ ಪೆಡ್ಲರ್ನ ಹೆಸರು ಮುತ್ತುರಾಜ್ ಆಗಿದ್ದು, ಆತ ಬೆಂಗಳೂರಿನ ಶ್ರೀರಾಮ್ ಪುರದವನಾಗಿದ್ದಾನೆ. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆಂಧ್ರದಿಂದ ನನಗೆ ಗಾಂಜಾ ಸರಬರಾಜು ಮಾಡ್ತಿದ್ದಾರೆ ಎಂದಿದ್ದಾನೆ. ಅಷ್ಟೇ ಅಲ್ಲ ಫೆ. 24 ರಂದು ವಿಶಾಖಪಟ್ಟಣಂನಿಂದ ಗಾಂಜಾ ಬರುತ್ತೆ ಎಂದು ಮಾಹಿತಿ ನೀಡಿದ್ದಾನೆ.
ಇದೇ ಮಾಹಿತಿ ಪಡೆದ ಪೊಲೀಸರು ಪೆಡ್ಲರ್ಸ್ಗಳಿಗಾಗಿ ಕಾದು ಕುಳಿತಿದ್ದರು. ಆರೋಪಿ ಮುತ್ತುರಾಜ ಹೇಳಿದ್ದ ಇಸ್ಕಾನ್ ದೇವಾಲಯ ಎದುರಿನ ಮೆಟ್ರೋ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸರು ಆರೋಪಿಗಳಿಗಾಗಿ ಕಾದು ಕುಳಿತಿದ್ದರು. ಆಗ ಒಂದು ಗೂಡ್ಸ್ ಗಾಡಿ ಅಲ್ಲಿಗೆ ಬಂದು ನಿಂತಿತ್ತು. ಅದರಲ್ಲಿ ಬಿಸ್ಕೆಟ್ ಮತ್ತು ಮ್ಯಾಗಿ ಬಾಕ್ಸ್ಗಳಿದ್ದವು. ಈ ಗಾಡಿಯನ್ನು ನೋಡಿ ಅನುಮಾನಗೊಂಡ ಪೊಲೀಸರು ಪರಿಶೀಲಿಸಿದಾಗ ಒಳಗಡೆ 80 ಕೆ.ಜಿ ಗಾಂಜಾ ಪತ್ತೆಯಾಗಿದೆ. ಗಾಡಿಯಲ್ಲಿದ್ದ ಇಬ್ಬರು ಆರೋಪಿಗಳಾದ ಗೌತಮ್ ಮತ್ತು ಅಬ್ದುಲ್ ರಫೀಯನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ನಾಳೆ - ನಾಡಿದ್ದು ಕಾಂಗ್ರೆಸ್ ಪಾದಯಾತ್ರೆ ಬೆಂಗಳೂರಿಗೆ ಆಗಮನ: ನಗರದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ
ಬಂಧಿಸಿ ವಿಚಾರಣೆ ನಡೆಸಿದಾಗ ಗೌತಮ್ ಹೇಳಿದ ಮಾತು ಕೇಳಿ ಪೊಲೀಸರೇ ಒಮ್ಮೆ ಶಾಕ್ ಅಗಿದ್ದಾರೆ. ಈ ಗೌತಮ್ ಮುಂಬೈನವನಾಗಿದ್ದು, ವಿಶಾಖಪಟ್ಟಣನಿಂದ ಈ ಮುತ್ತುರಾಜ್ಗೆ ಗಾಂಜಾ ಸರಬರಾಜು ಮಾಡ್ತಿದ್ದ. ಪೊಲೀಸರಿಗೆ ಅನುಮಾನ ಬಾರದಂತೆ ಬಿಸ್ಕೆಟ್ ಮತ್ತು ಮ್ಯಾಗಿ ಬಾಕ್ಸ್ಗಳಲ್ಲಿ ಈತ ಗಾಂಜಾ ಸಾಗಣೆ ಮಾಡ್ತಿದ್ದ. ಅಷ್ಟೇ ಅಲ್ಲದೇ ಪೊಲೀಸರಿಗೆ ಅನುಮಾನ ಬಾರದಂತೆ ಬಾಕ್ಸ್ಗಳನ್ನ ಟಾರ್ಪಲ್ ಹಾಕಿ ಮುಚ್ಚಿ ಇಡುತ್ತಿದ್ದ. ಕಾಲೇಜ್ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿದ್ದ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು.
ಗೂಡ್ಸ್ ಗಾಡಿ ಚಾಲಕ ಅಬ್ದುಲ್ ರಫೀ ಗಾಡಿಯಲ್ಲಿ ಇರೋದು ಗಾಂಜಾ ಅಂತಾ ಗೊತ್ತಿದ್ದರೂ ಹಣದಾಸೆಗೆ ಬಿದ್ದು ಗಾಂಜಾ ಸಾಗಾಟ ಮಾಡ್ತಿದ್ದ ಎಂದು ತಿಳಿದು ಬಂದಿದೆ. ಗೌತಮ್ ಈ ಹಿಂದೆ ಗಾಂಜಾ ಮಾರಾಟ ಪ್ರಕರಣದಲ್ಲಿ ಮಣಿಪಾಲದಲ್ಲಿ ಪೊಲೀಸರ ಅತಿಥಿಯಾಗಿದ್ದನು. ಒಟ್ಟಾರೆ ಮಹಾಲಕ್ಷ್ಮಿ ಲೇಔಟ್ ಪೊಲೀಸರ ಕಾರ್ಯಾಚರಣೆಯಿಂದ 80 ಕೆ.ಜಿ ಗಾಂಜಾವನ್ನ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಮೇಲೆ ಎನ್ಡಿಪಿಎಸ್ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ.