ಬೆಂಗಳೂರು: ನಗರದಲ್ಲಿ ಬಡ, ಮಧ್ಯಮ ವರ್ಗದ ಜನರ ಹಸಿವು ನೀಗಿಸುವ ಸಲುವಾಗಿ ತೆರೆಯಲಾಗಿರುವ ಇಂದಿರಾ ಕ್ಯಾಂಟೀನ್ಗಳ ಪೈಕಿ ಕೆಲವು ಸ್ಥಗಿತಗೊಂಡಿರುವುದು ಬೆಳಕಿಗೆ ಬಂದಿದೆ.
ನಗರದ ಪಾರ್ವತಿಪುರ, ಸಂಪಿಗೆ ರಾಮನಗರ, ಬಿಸ್ಮಿಲ್ಲಾನಗರ, ಹೊಸಹಳ್ಳಿ, ಪುಲಿಕೇಶಿ ನಗರ, ಎಚ್‌ಎಸ್‌ಆರ್ ಲೇಔಟ್‌ನ ಸೋಮಸುಂದರ ಪಾಳ್ಯ, ಸುಬ್ರಮಣ್ಯಪುರಂನ ವಸಂತನಗರ, ಮಹದೇವಪುರದ ಎ. ನಾರಾಯಣಪುರ, ಕೋಗಿಲು, ಪ್ರಕೃತಿನಗರ ಸೇರಿದಂತೆ 40 ಕಡೆಗಳಲ್ಲಿ ಕ್ಯಾಂಟೀನ್ಗಳ ಕಾರ್ಯನಿರ್ವಹಣೆ ನಿಂತಿದೆ ಎಂದು ತಿಳಿದು ಬಂದಿದೆ.
ನಗರದ 198 ವಾರ್ಡ್‌ಗಳಲ್ಲೂ ಒಂದೊಂದು ಇಂದಿರಾ ಕ್ಯಾಂಟೀನ್ ತೆರೆಯಲು ಯೋಜನೆ ರೂಪಿಸಲಾಗಿತ್ತು. 20 ವಾರ್ಡ್‌ಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ಕ್ಯಾಂಟೀನ್ ತೆರೆಯಲಾಗಿತ್ತು. ಕೆಲವೆಡೆ ಕಟ್ಟಡ ಸಿದ್ಧಗೊಳಿಸಿದ್ದರೂ ಉದ್ಘಾಟನೆಯಾಗಿರಲಿಲ್ಲ. ಕೆಲ ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಕ್ಯಾಂಟೀನ್ಗಳೂ ಬಾಗಿಲು ಮುಚ್ಚುತ್ತಿದ್ದು, ಇವುಗಳಿಗೆ ಆಹಾರ ಪೂರೈಸಲು ಅದಮ್ಯ ಚೇತನ, ರಿವ್ಸಾರ್ ಹಾಗೂ ಶೆಫ್ಟಾಕ್ ಸಂಸ್ಥೆಗಳಿಗೆ ತಲಾ 55 ಲಕ್ಷ ರೂಪಾಯಿ ಟೆಂಡರ್ ನೀಡಲಾಗಿತ್ತು. 2020 ಮತ್ತು 2021ರಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕ್ಯಾಂಟೀನ್‌ನತ್ತ ಜನರು ಬರುವುದು ಕಡಿಮೆಯಾಗಿತ್ತು. ಆದರೂ, ಈ ಮೂರು ಸಂಸ್ಥೆಗಳಿಗೆ ಟೆಂಡರ್ ವಿಸ್ತರಿಸಲಾಗಿತ್ತು.
ಬಾಕಿ ಉಳಿದ ಸಬ್ಸಿಡಿ ಹಣ: ಪಾಲಿಕೆಯು ಆಹಾರ ಪೂರೈಸುತ್ತಿರುವ ಗುತ್ತಿಗೆ ಕಂಪನಿಗಳಿಗೆ ವಾರ್ಷಿಕ ನವೀಕರಣ ಪತ್ರ ನೀಡುತ್ತಿಲ್ಲ. ಆರು ತಿಂಗಳಿನಿಂದ ಸಬ್ಸಿಡಿ ನೀಡಿಲ್ಲ. ಕೆಲವೆಡೆ ಗ್ರಾಹಕರ ಕೊರತೆ ಉಂಟಾಗಿದೆ. ಹೀಗಾಗಿ ಕೆಲ ಕ್ಯಾಂಟೀನ್ಗಳ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಗಿ ಬಂದಿದ್ದು, ಟೆಂಡರ್ ಪ್ರಕಾರ, ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ 58.30 ರೂ ನಿಗದಿಪಡಿಸಲಾಗಿದೆ. ಇದರಲ್ಲಿ 25 ರೂಪಾಯಿ ಗ್ರಾಹಕರಿಂದ ಪಡೆಯಲಾಗುತ್ತದೆ. ಉಳಿದ 33.30 ರೂಪಾಯಿ ಹಣವನ್ನು ಪಾಲಿಕೆ ನೀಡಬೇಕಾಗಿದೆ.
ಇಂದಿರಾ ಕ್ಯಾಂಟೀನ್ ಆಹಾರ ತಯಾರಕರ ಗುತ್ತಿಗೆಗೆ ಟೆಂಡರ್ ಕರೆಯಲು ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಯಲ್ಲಿ ಜನರನ್ನು ಕ್ಯಾಂಟೀನ್‌ನತ್ತ ಆಕರ್ಷಿಸುವ ಉದ್ದೇಶದಿಂದ ಆಹಾರ ಪಟ್ಟಿ ಬದಲಾವಣೆಯನ್ನು ಸೇರಿಸಲಾಗಿದೆ. ಸರಕಾರ ಅನುಮತಿ ನೀಡಿದ ಕೂಡಲೇ ಟೆಂಡರ್ ಕರೆಯಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
67,500 ಊಟ ಪೂರೈಕೆ: ಪಾಲಿಕೆ ವ್ಯಾಪ್ತಿಯಲ್ಲಿನ 150 ಇಂದಿರಾ ಕ್ಯಾಂಟೀನ್ಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಮೂರು ಸಮಯ ಸೇರಿ ಸರಾಸರಿ 67,500 ಊಟಗಳು ಮಾರಾಟವಾಗುತ್ತಿದೆ. ವಾರದ ರಜೆಗಳು, ಹಬ್ಬದ ದಿನಗಳಲ್ಲಿ ಈ ಸಂಖ್ಯೆ ಕಡಿಮೆಯಾಗುತ್ತದೆ. ಈ ಹಿಂದೆ ಕ್ಯಾಂಟೀನ್ ಆರಂಭದ ದಿನಗಳಲ್ಲಿ 1 ಲಕ್ಷ ಊಟ ಖಾಲಿಯಾಗುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟೆಂಡರ್ ನಿಯಮದ ಪಾಲನೆಯಿಲ್ಲ: ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆಗೆ ಪಾಲಿಕೆಯಿಂದ ಪ್ರತಿವರ್ಷ ಟೆಂಡರ್ ಕರೆಯಬೇಕು ಎಂಬ ನಿಯಮವಿದೆ. ಆದರೆ, ಮೂರು ವರ್ಷಗಳಿಂದ ಈ ನಿಯಮ ಪಾಲನೆಯಾಗುತ್ತಿಲ್ಲ. ಇದು ಕ್ಯಾಂಟೀನ್ಗಳಿಗೆ ಬೀಗ ಬೀಳಲು ಕಾರಣವಿರಬಹುದು. ಜತೆಗೆ ಆಹಾರದ ಗುಣಮಟ್ಟ ಕಾಪಾಡಿಕೊಳ್ಳದ ಕಾರಣ ಗ್ರಾಹಕರು ದೂರವಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಇಸ್ಕಾನ್ ಹೆಗಲಿಗೆ ನೀಡಲು ಮುಂದಾದ ಬಿಬಿಎಂಪಿ