ಬೆಂಗಳೂರು: ಪ್ರಮಾಣಿಕ ಐಎಎಸ್ ಅಧಿಕಾರಿ ಎಂದೆನಿಸಿಕೊಂಡಿರುವ ರೋಹಿಣಿ ಸಿಂಧೂರಿಯವರನ್ನು ಸರ್ಕಾರ ದಿಢೀರ್ ಎತ್ತಂಗಡಿ ಮಾಡಿದೆ.
ಕರ್ನಾಟಕ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಸ್ಥಾನದಿಂದ ರೋಹಿಣಿ ಸಿಂಧೂರಿ ಅವರನ್ನು ಸದ್ದಿಲ್ಲದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದೀಗ ರೋಹಿಣಿ ಸಿಂಧೂರಿ ವರ್ಗಾವಣೆ ಹಿಂದೆ ಹಲವು ಅನುಮಾನಗಳು ಮೂಡಿವೆ. ದಕ್ಷ ಅಧಿಕಾರಿಯನ್ನು ವರ್ಗಾವಣೆ ಮಾಡಿ ಯಾವುದೇ ಸ್ಥಳ ನಿಯೋಜನೆ ಮಾಡದಿರುವುದು ಹಲವು ಪ್ರಶ್ನೆಗಳನ್ನು ಮೂಡಿಸಿದೆ.
ಹಾಸನ ಡಿಸಿಯಾಗಿದ್ದ ವೇಳೆ ಸಾಕಷ್ಟು ಬಾರಿ ದಕ್ಷ ಅಧಿಕಾರಿ ರೋಹಿಣಿ ಸಿಂಧೂರಿ ಸುದ್ದಿಗೆ ಗ್ರಾಸವಾಗುತ್ತಿದ್ದರು. ಹಾಸನ ರಾಜಕೀಯ ನಾಯಕರ ಜತೆ ಪದೆ ಪದೇ ಸಂಘರ್ಷ ಏರ್ಪಡುತ್ತಿತ್ತು. ಎ.ಮಂಜು ಹಾಗೂ ಎಚ್.ಡಿ. ರೇವಣ್ಣರ ಜತೆ ನಾನಾ ವಿಚಾರಗಳಿಗೆ ತಿಕ್ಕಾಟ ಮೂಡುತ್ತಿತ್ತು. ರೋಹಿಣಿ ಸಿಂಧೂರಿ ಜಾಗಕ್ಕೆ ಕಾರ್ಮಿಕ ಇಲಾಖೆ ಆಯುಕ್ತರಾಗಿರುವ ಕೆ.ಜಿ. ಶಾಂತರಾಮ್ಗೆ ಹೆಚ್ಚುವರಿ ಹೊಣೆ ನೀಡಿ ನಿಯೋಜನೆಗೊಳಿಸಲಾಗಿದೆ.
ವರ್ಗಾವಣೆ ಹಿಂದೆ ಹಲವು ಅನುಮಾನ:
ಈ ವರ್ಗಾವಣೆ ಹಿಂದೆ ಹಲವು ಅನುಮಾನಗಳು ಮೂಡಿವೆ. ಗುತ್ತಿಗೆದಾರರ ಒತ್ತಡಕ್ಕೆ ಮಣಿದು ಸರ್ಕಾರ ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇನ್ನೊಂದೆಡೆ ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಸಿಂಧೂರಿ ನಿರ್ಧರಿಸಿದ್ದರು. ಈ ಸಂಬಂಧ ವೃತ್ತಿಪರ ತರಬೇತಿ ಕೇಂದ್ರಗಳಿಗಾಗಿ ಟೆಂಡರ್ ಕರೆಯಲು ಮುಂದಾಗಿದ್ದರು. ಈ ಸಂಬಂಧ ಹಿರಿಯ ಅಧಿಕಾರಿ ಹಾಗು ರೋಹಿಣಿ ಸಿಂಧೂರಿ ಮಧ್ಯೆ ತಿಕ್ಕಾಟ ಶುರುವಾಗಿತ್ತು ಎನ್ನಲಾಗಿದೆ. ರೋಹಿಣಿ ಸಿಂಧೂರಿ ಟೆಂಡರ್ ಪ್ರಕ್ರಿಯೆಯನ್ನು ಸಡಿಲಗೊಳಿಸಲು ನಿರಾಕರಿಸಿದ ಹಿನ್ನೆಲೆ ಹಿರಿಯ ಅಧಿಕಾರಿ ಹಾಗೂ ರಾಜಕಾರಣಿ ಪ್ರಭಾವ ಬಳಸಿ ಅವರನ್ನು ಎತ್ತಂಗಡಿ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.