ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ ಖಾನ್‌ನನ್ನು ಸಿಟಿ ಸಿವಿಲ್ ನ್ಯಾಯಾಲಯದ ಸಿಸಿಹೆಚ್ 1ನೇ ನ್ಯಾಯಾಧೀಶ ಶಿವಶಂಕರ್ ಬಿ ಅಮರಣ್ಣನವರ್ 14ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಿ ಆದೇಶ ಹೊರಡಿಸಿದ್ದಾರೆ.
ಸಿಟಿ ಸಿವಿಲ್ ಕೋರ್ಟ್‌ನ ಸಿಸಿಹೆಚ್ 1ಗೆ ಎಸ್ಐಟಿ ಬಾಡಿವಾರೆಂಟ್ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ರು. ಈ ಅರ್ಜಿ ವಿಚಾರ ಇಂದು ನಡೆದಿದ್ದು, ನ್ಯಾಯಾಲಯ 14 ದಿನಗಳ ಕಾಲ ವಶಕ್ಕೆ ನೀಡಿದೆ. ಮಧ್ಯಾಹ್ನದವರೆಗೆ ಮನ್ಸೂರ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಇಂದು ನ್ಯಾಯಲಯದಿಂದ ಅನುಮತಿ ಪಡೆದು ಎಸ್ಐಟಿ ಎಸಿಪಿ ಬಾಲರಾಜು ಮತ್ತು ಇನ್ಸ್‌ಪೆಕ್ಟರ್ ಶೇಖರ್ ಮನ್ಸೂರ್‌ನನ್ನು ಜೈಲಿನಿಂದ ಕರೆತಂದು, ಪೊಲೀಸ್ ಭದ್ರತೆ ಮೂಲಕ ನ್ಯಾಯಾಲಯಕ್ಕೆ ಕರೆತಂದು ಹಾಜರುಪಡಿಸಿದ್ರು.
ನಿನ್ನೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎದೆನೋವು ಎಂದು ಅಳಲು ತೋಡಿಕೊಂಡ ಕಾರಣ ಜೈಲು ಸಿಬ್ಬಂದಿ ಜಯದೇವ್ ಆಸ್ಪತ್ರೆಗೆ ದಾಖಲಿಸಿದ್ರು. ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡ ಹಿನ್ನೆಲೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ರು. ಸದ್ಯ ಎಸ್ಐಟಿ ನ್ಯಾಯಾಲಯದ ಅನುಮತಿ ಪಡೆದು ತನಿಖೆಗಾಗಿ ವಶಕ್ಕೆ ಪಡೆಯಲಾಗಿದೆ. ಈಗಾಗ್ಲೇ ಇಡಿ ತನಿಖೆ ನಡೆಸಿ ಮುಗಿಸಿದ್ದು ಸದ್ಯ ಎಸ್ಐಟಿ ವಶಕ್ಕೆ ಪಡೆದ ಹಿನ್ನೆಲೆ ಹಲವು ಐಪಿಎಸ್ ಹಾಗೂ ರಾಜಕಾರಣಿಗಳ ಎದೆಯಲ್ಲಿ ನಡುಕ ಶುರುವಾಗಿದೆ.