ಬೆಂಗಳೂರು: ಗೋವಾ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಮನೋಹರ್ ಪರಿಕ್ಕರ್ ನಿಧನದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಿಕೆ ಮಾಡಲಾಗಿದೆ.
ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಕಡೆಗೂ ಮಣಿದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಭಾನುವಾರ ಇಹಲೋಕ ತ್ಯಜಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಇಂದಿನ ತನ್ನೆಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿದೆ.
ಇಂದು ಕರ್ನಾಟಕ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಆಯ್ಕೆಗಾಗಿ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆ ಕರೆಯಲಾಗಿತ್ತು. ಸಭೆ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಚುನಾವಣಾ ಸಮಿತಿ ಶಿಫಾರಸು ಮಾಡಿರುವ ಹೆಸರುಗಳಿಗೆ ಕೋರ್ ಕಮಿಟಿ ಸಭೆಯಲ್ಲಿ ಸಮ್ಮತಿ ಪಡೆದು ಪಟ್ಟಿಯೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದೆಹಲಿಗೂ ತೆರಳಿದ್ದಾರೆ. ಈ ನಡುವೆ ಪರಿಕ್ಕರ್ ನಿಧನ ಹೊಂದಿದ ಪರಿಣಾಮ ಇಂದಿನ ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ.
ಪಕ್ಷದ ವರಿಷ್ಠ ನಾಯಕರು ಗೋವಾಗೆ ತೆರಳಿ ಅಂತಿಮ ದರ್ಶನ ಪಡೆಯಲಿದ್ದು, ಸಂತಾಪ ಸೂಚಕವಾಗಿ ಪಕ್ಷದ ಎಲ್ಲ ಚಟುವಟಿಕೆ ರದ್ದುಪಡಿಸಲಾಗಿದೆ. ಹಾಗಾಗಿ ದೆಹಲಿಗೆ ತೆರಳಿರುವ ರಾಜ್ಯ ನಾಯಕರು ಮತ್ತೊಂದು ದಿನ ದೆಹಲಿಯಲ್ಲಿಯೇ ತಂಗಬೇಕಿದೆ.
ಇನ್ನೇನು ಇಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳು ಕೂಡ ಮತ್ತೊಂದು ದಿನ ಕಾಯಬೇಕಿದ್ದು, ಪರಿಕ್ಕರ್ ಅಂತ್ಯ ಸಂಸ್ಕಾರದ ನಂತರ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಗೆ ಸಮಯ ನಿಗದಿಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
Conclusion: