ಬೆಂಗಳೂರು : ಕಲಬುರ್ಗಿಯಲ್ಲಿ ಪೌರ ಕಾರ್ಮಿಕರಿಬ್ಬರು ಮ್ಯಾನ್ಹೋಲ್ ಸ್ವಚ್ಛಗೊಳಿಸಲು ಇಳಿದು ಉಸಿರುಗಟ್ಟಿ ಸಾವನ್ನಪ್ಪಿದ ಪ್ರಕರಣದಲ್ಲಿ ಜಲ ಮಂಡಳಿ ನೀಡಿರುವ ಹೇಳಿಕೆಗೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ ಜನವರಿ 28ರಂದು ಕಲಬುರಗಿಯಲ್ಲಿ ಮ್ಯಾನ್ ಹೋಲ್ಗಿಳಿದ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ್ದರು. ಈ ಸಾವಿಗೆ ಕಾರಣಗಳನ್ನು ನೀಡುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ನಿರ್ದೇಶಿಸಿತ್ತು.
ಅದರಂತೆ ಜಲಮಂಡಳಿ ವರದಿ ನೀಡಿದ್ದು, ವರದಿಯಲ್ಲಿ ಪೌರಕಾರ್ಮಿಕರು ಸ್ವಯಂಪ್ರೇರಿತರಾಗಿ ಮ್ಯಾನ್ ಹೋಲ್ಗೆ ಇಳಿದರು. ಒಳಗೆ ಸಮಸ್ಯೆ ಏನಿದೆ ಎಂದು ನೋಡಲು ಇಳಿದವರು ಉಸಿರುಗಟ್ಟಿ ಪ್ರಜ್ಞಾಹೀನರಾದರು. ನಂತರ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟರು. ಘಟನೆಗೆ ಐವರು ಪ್ರತ್ಯಕ್ಷದರ್ಶಿಗಳಿದ್ದಾರೆ ಎಂದು ತಿಳಿಸಿತ್ತು.
ವರದಿಯಲ್ಲಿ ಕಾರ್ಮಿಕರು ಸ್ವಯಂಪ್ರೇರಿತರಾಗಿ ಇಳಿದರು ಎಂಬ ಹೇಳಿಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ಅವರೇ ಸ್ವಯಂಪ್ರೇರಿತರಾಗಿ ಇಳಿದರು ಎಂದು ಹೇಗೆ ನಿರ್ಧರಿಸಿದಿರಿ. ಅವರೇನು ತಮ್ಮ ಖುಷಿಗೆ ಅಲ್ಲಿಗೆ ಇಳಿದಿದ್ದರಾ ಎಂದು ನ್ಯಾಯಾಲಯ ಪ್ರಶ್ನಿಸಿತು.
ನೀವು ಕೇಳಿದ್ದಕ್ಕೆ ತಾನೇ ಅವರು ಅಲ್ಲಿಗೆ ಇಳಿದದ್ದು. ಅಲ್ಲದೇ, ಪೌರಕಾರ್ಮಿಕರ ಸಾವಿಗೆ ಗುತ್ತಿಗೆದಾರರೂ ಕಾರಣರಲ್ಲ. ಮಂಡಳಿಯೂ ಅಲ್ಲ ಎಂದ ಮೇಲೆ ಮತ್ಯಾರನ್ನು ಹೊಣೆ ಮಾಡಬೇಕು ಎಂದು ಪ್ರಶ್ನಿಸಿರುವ ಪೀಠ, ಕಾರ್ಮಿಕರು ಸ್ವಯಂಪ್ರೇರಿತರಾಗಿ ಮ್ಯಾನ್ಹೋಲ್ಗೆ ಇಳಿದಿದ್ದರಾ ಅಥವಾ ಅವರನ್ನು ಇಳಿಸಲಾಗಿತ್ತಾ ಎಂಬ ಬಗ್ಗೆ ಪ್ರತ್ಯಕ್ಷದರ್ಶಿಗಳೆನ್ನಲಾದ 5 ಜನರ ಹೇಳಿಕೆಯನ್ನು ಸಲ್ಲಿಸುವಂತೆ ಮಂಡಳಿಗೆ ನಿರ್ದೇಶಿಸಿತು. ಈ ಪ್ರಕಣದ ವಿಚಾರಣೆಯನ್ನು ಜುಲೈ 6ಕ್ಕೆ ಮುಂದೂಡಿದೆ.