ಬೆಂಗಳೂರು : ನೀವೇನಾದರೂ ಇದೇ ಮೇ 30 ರಂದು ಲಾಲ್‌ಬಾಗ್ ಕಡೆ ಹೋದರೆ, ನಿಮ್ಮನ್ನ ಘಮ ಘಮಿಸೋ ಹಲಸು - ಮಾವಿನ ಹಣ್ಣು ಸ್ವಾಗತಿಸುತ್ತವೆ. ತೋಟಗಾರಿಕಾ ಇಲಾಖೆ ಲಾಲ್‌ಬಾಗ್‌ನಲ್ಲಿ ರಾಜ್ಯ ಮಟ್ಟದ ಮಾವು ಹಾಗೂ ಹಲಸು ಮೇಳವನ್ನು ಆಯೋಜಿಸಿದೆ.
ಮೇ 30ರಿಂದ ಪ್ರಾರಂಭವಾಗುವ ಈ ಮೇಳವು ಜೂನ್ 24ರವರೆಗೂ ನಡೆಯಲಿದೆ. ಮೇಳದ ಉದ್ಘಾಟನೆಯನ್ನ ಸಿಎಂ ಕುಮಾರಸ್ವಾಮಿ ಮಾಡಲಿದ್ದಾರೆ ಅಂತಾ ಲಾಲ್‌ಬಾಗ್ ನಿರ್ದೇಶಕ ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮೇಳದಲ್ಲಿ ಬರೋಬ್ಬರಿ 50ಕ್ಕಿಂತ ಹೆಚ್ಚು ವೆರೈಟಿ ಮಾವು ಹಾಗೂ 10ಕ್ಕಿಂತ ಹೆಚ್ಚು ವೆರೈಟಿ ಹಲಸಿನ ಹಣ್ಣು ಪ್ರದರ್ಶನದಲ್ಲಿ ಲಭ್ಯ ಇದೆ. ಮಾವು ಹಾಗೂ ಹಲಸಿನಿಂದ ತಯಾರಿಸಿದ ಖಾದ್ಯಗಳೂ ಕೂಡ ಸಿಗುತ್ತವೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ 8 ಜಿಲ್ಲೆಗಳ ಮಾವು ಮತ್ತು ಹಲಸು ಬೆಳೆಗಾರರು ಇದರಲ್ಲಿ ಭಾಗವಹಿಸಲಿದ್ದಾರೆ.
ಮೇಳದ ಉದ್ದೇಶ ಬೆಳೆಗಾರರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸುವುದಾಗಿದೆ. ಗ್ರಾಹಕರಿಗೆ ಕಾರ್ಬೈಡ್ ಮುಕ್ತ, ಸಹಜವಾಗಿ ಮಾಗಿದ ಹಣ್ಣುಗಳನ್ನು ರೈತರಿಂದ ನೇರವಾಗಿ ಒದಗಿಸುವುದಾಗಿದೆ. ಮೇಳದಲ್ಲಿ ಮಾವು ಬೆಳೆಗಾರರಿಗೆ ಒಟ್ಟು 112 ಮಳಿಗೆಗಳು ಮತ್ತು ಹಲಸು ಬೆಳೆಗಾರರಿಗೆ 10 ಮಳಿಗೆಗಳು ಮತ್ತು ಸಂಸ್ಕರಿಸಿದ ಪದಾರ್ಥಗಳಿಗೆ 9 ಮಳಿಗೆಗಳನ್ನು ಹಂಚಿಕೆ ಮಾಡಲಾಗಿದೆ.
ಆನ್ಲೈನ್ ನಲ್ಲೇ ಆರ್ಡರ್ ಮಾಡಿ ಮನೆಯಲ್ಲೇ ಕೂತು ಮಾವು ಸವಿಯಿರಿ
ಇನ್ನು ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಬುಕ್ ಮಾಡುವವರಿಗೆ ಪೋಸ್ಟಲ್ ಮೂಲಕ ಮಾವು ಪ್ರಿಯರಿಗೆ ಮಾವಿನ ಹಣ್ಣು ತಲುಪಿಸುವ ಕೆಲಸ ಮಾಡುತ್ತಿದೆ ತೋಟಗಾರಿಕಾ ಇಲಾಖೆ. ಸದ್ಯ ಬೆಂಗಳೂರು ನಗರಕ್ಕೆ ಮಾತ್ರ ಈ ವ್ಯವಸ್ಥೆ ಸೀಮಿತವಾಗಿದ್ದು, ಹಣ್ಣು ಸರಬರಾಜು ಮಾಡಲು ಅಂಚೆ ಇಲಾಖೆಯು business parcel service ಸೇವೆಯನ್ನು ಇದೇ ಮೊದಲ ಬಾರಿಗೆ ಒದಗಿಸಿದೆ.
ಬೆಳೆಗಾರರಿಂದ ನೇರವಾಗಿ ಸರಬರಾಜು ಮಾಡಲು ಅನುಕೂಲವಾಗುವಂತೆ ಬಿ2ಸಿ ಪೋರ್ಟಲ್‌ನ ಅಭಿವೃದ್ಧಿಪಡಿಸಿದ್ದು ಪ್ರಸ್ತುತ ಚಾಲನೆಯಲ್ಲಿದೆ. www.karsirimangoes.Karnataka.gov.in ಭೇಟಿ ನೀಡಬಹುದು. ಬಿ2ಸಿ ಪೋರ್ಟಲ್‌ನಲ್ಲಿ ಗ್ರಾಹಕರು ಸಲ್ಲಿಸುವ ಮಾವಿನ ಹಣ್ಣಿನ ಬೇಡಿಕೆಯನ್ವಯ ಅಂಚೆ ಇಲಾಖೆಯಿಂದ ಹೊಸ ವ್ಯವಸ್ಥೆ ಒದಗಿಸಿದೆ. ಆನ್‌ಲೈನ್‌ನಲ್ಲಿ ಕ್ಯಾಶ್ ಅಂಡ್ ಡೆಲಿವರಿ ವ್ಯವಸ್ಥೆ ಇಲ್ಲ. ಬದಲಾಗಿ ಆನ್ ಲೈನ್ ಪೇಮೆಂಟ್‌ನಲ್ಲೇ ಸರ್ವೀಸ್ ಚಾರ್ಜ್ 81 ರೂ. ನೀಡಬೇಕು. ಕನಿಷ್ಠ 3ಕೆಜಿ ಮಾವಿನಹಣ್ಣು ಖರೀದಿ ಮಾಡಬೇಕು ಎಂದು ತಿಳಿಸಿದ್ದಾರೆ.