ಬೆಂಗಳೂರು: ಮದುವೆಗೆ ನಾದಿನಿ ನಿರಾಕರಿಸಿದಕ್ಕೆ ಚಾಕುವಿನಿಂದ ಮಾರಣಾಂತಿಕವಾಗಿ ಇರಿದು ಬಂಧನ ಭೀತಿಯಿಂದ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ.
ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟಿಗೇನಹಳ್ಳಿಯ ನಾಗರಾಜ್ ಮೃತ ವ್ಯಕ್ತಿ. ಈತ ಕೆಲ ವರ್ಷಗಳ ಹಿಂದೆ ಪ್ರೇಮಾ ಎಂಬಾಕೆಯನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಜೀವನಕ್ಕಾಗಿ ಪುಡ್ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ವ್ಯಾಸಂಗಕ್ಕಾಗಿ ನಾದಿನಿ ಮಂಜುಳಾ (ಹೆಸರು ಬದಲಿಸಲಾಗಿದೆ) ನಾಗರಾಜ್ ಮನೆಯಲ್ಲಿ ವಾಸವಾಗಿದ್ದಳು. ಹೆಂಡತಿ ಇಲ್ಲದಿರುವ ಸಮಯದಲ್ಲಿ ನಾದಿನಿಗೆ ನೀನು ನನಗೆ ಬೇಕು. ನಿನ್ನನ್ನು ಮದುವೆಯಾದರೆ ನಿನ್ನ ಆಸ್ತಿಯೆಲ್ಲಾ ನನ್ನದಾಗುತ್ತದೆ. ಹೀಗಾಗಿ ನನ್ನನ್ನು ಮದುವೆಯಾಗು ಎಂದು ಪೀಡಿಸುತ್ತಿದ್ದ.
ಮಂಜುಳಾ ಮದುವೆಯಾಗಲು ಇಷ್ಟವಿಲ್ಲ ಎಂದು ಹೇಳಿದರೂ ತನ್ನ ಚಾಳಿ ಮುಂದುವರೆಸಿದ್ದ. ಮದುವೆಗೆ ಒಲ್ಲೆ ಎಂದಿದ್ದಕ್ಕೆ ರೊಚ್ಚಿಗೆದ್ದಿದ್ದ ನಾಗರಾಜ್ ಕಳೆದ ಬುಧವಾರ ಬೆಳಗ್ಗೆ ಹೆಂಡತಿ ಇಲ್ಲದಿರುವ ಸಮಯ ನೋಡಿ ಮನೆಯಲ್ಲಿದ್ದ ಮಂಜುಳಾನನ್ನು ಗುರಿಯಾಗಿಸಿಕೊಂಡು ತರಕಾರಿ ಕತ್ತರಿಸುವ ಚಾಕುವಿನಿಂದ ಆಕೆಯ ಎದೆ, ಹೊಟ್ಟೆ ಹಾಗೂ ಭುಜಕ್ಕೆ 8 ರಿಂದ 10 ಬಾರಿ ಇರಿದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಮಂಜುಳಾನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳದಿಂದ ಪರಾರಿಯಾಗಿದ್ದ ನಾಗರಾಜ್, ಬಂಧನ ಭೀತಿಯಿಂದ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಯಲಹಂಕ ಪೊಲೀಸರು ಮಾಹಿತಿ ನೀಡಿದ್ದಾನೆ.