ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕೈಗಾರಿಕಾ ಪ್ರದೇಶದ ಸಮೀಪ ಪತಿಯಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಪತ್ನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅರ್ಪಿತಾ ಮೃತ ದುರ್ದೈವಿ. ಹೊಸಕೋಟೆ ನಿವಾಸಿಯಾದ ಆರೋಪಿ ರಮೇಶ್ ಹೆಂಡತಿಯ ಕತ್ತು, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಬಳಿಕ ತಾನು ಕತ್ತು, ಹೊಟ್ಟೆ ಭಾಗಕ್ಕೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅರ್ಪಿತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಪತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
![Man stabs wife to death in Bengaluru](https://etvbharatimages.akamaized.net/etvbharat/prod-images/16666151_689_16666151_1665969326351.png)
ಪ್ರೀತಿಸಿ ಮದುವೆಯಾಗಿದ್ದ ಜೋಡಿ: ಏಳು ವರ್ಷಗಳ ಹಿಂದೆ ರಮೇಶ್ ಹಾಗೂ ಅರ್ಪಿತಾ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರಿಗೆ ಮುದ್ದಾದ 6 ವರ್ಷದ ಗಂಡು ಮಗು ಹಾಗೂ 4 ವರ್ಷದ ಹೆಣ್ಣು ಮಗು ಇದೆ. ಇಬ್ಬರು ಸಹ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಜಗಳ ವಿಕೋಪಕ್ಕೆ ತಿರುಗಿ ಹೊಸಕೋಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಈ ನಡುವೆ ಇಬ್ಬರು ಒಪ್ಪಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ದೂರವಾಗಲು ನಿರ್ಧರಿಸಿದ್ದರಂತೆ. ಅದರಂತೆ ಬೇರೆ ಬೇರೆ ಜೀವನ ಸಾಗಿಸುತ್ತಿದ್ದರು.
ಆದರೆ ಕಳೆದ ಒಂದು ವಾರದಿಂದ ಪತ್ನಿ ಅರ್ಪಿತಾ ಮೇಲೆ ಅನುಮಾನಪಟ್ಟ ಪತಿ ರಮೇಶ್, ಇಬ್ಬರು ಒಟ್ಟಿಗೆ ಜೀವನ ನಡೆಸೋಣ ಎಂದು ಆಕೆಯ ಜೊತೆ ಮಾತನಾಡುತ್ತಿದ್ದರಂತೆ. ಭಾನುವಾರ ಬೆಳಗ್ಗೆ ಪತ್ನಿಯನ್ನು ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಪಿಲ್ಲಗುಂಪೆ ಕೈಗಾರಿಕಾ ಪ್ರದೇಶಕ್ಕೆ ಕರೆದುಕೊಂಡು ಬಂದು, ಬಳಿಕ ಮನಸೋ ಇಚ್ಛೆ ಸುಮಾರು 15 ಬಾರಿ ಚಾಕುವಿನಿಂದ ಇರಿದಿದ್ದರು. ನಂತರ ತಾನೂ ಸಹ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು.
ಇದನ್ನೂ ಓದಿ: ಕಾರು-ಬೈಕ್ ನಡುವೆ ಭೀಕರ ಅಪಘಾತ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಹಾಡಹಗಲೇ ಜನಜಂಗುಳಿ ಇರುವ ಸ್ಥಳದಲ್ಲಿ ಪತ್ನಿಗೆ ಪತಿ ಚಾಕುವಿನಿಂದ ಇರಿದಿರುವ ಘಟನೆ ನೋಡುಗರಲ್ಲಿ ನಡುಕ ಹುಟ್ಟಿಸಿದೆ. ತಕ್ಷಣ ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಇಬ್ಬರನ್ನು ಹೊಸಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅರ್ಪಿತಾ ಗಂಭೀರ ಗಾಯಗೊಂಡ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಅಪ್ಪ ಅಮ್ಮನ ಜಗಳದಲ್ಲಿ ಏನು ಅರಿಯದ ಪುಟ್ಟ ಮಕ್ಕಳು ಮಾತ್ರ ಅನಾಥರಾಗಿದ್ದಾರೆ.
![Man stabs wife to death in Bengaluru](https://etvbharatimages.akamaized.net/etvbharat/prod-images/16666151_952_16666151_1665969353610.png)
ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅರ್ಪಿತಾ ಮೇಲೆ ಅನುಮಾನಗೊಂಡು ಪತಿ ಕೃತ್ಯ ಎಸಗಿದ್ದಾನೆ ಎನ್ನಲಾಗ್ತಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಯುವಕರ ಮಧ್ಯೆ ಮಾರಾಮಾರಿ: ಓರ್ವ ಸಾವು, ಮತ್ತೋರ್ವ ಗಂಭೀರ