ಆನೇಕಲ್: ಗಂಡನಿಂದಲೇ ಪತ್ನಿ ಭೀಕರವಾಗಿ ಕೊಲೆಯಾಗಿರುವ ಪ್ರಕರಣ ಬೆಂಗಳೂರು ನಗರ ಜಿಲ್ಲೆಯ ಚಂದಾಪುರದ ಸಮೀಪದ ಬನಹಳ್ಳಿಯಲ್ಲಿ ಘಟನೆ ನಡೆದಿದೆ.
ಮಾಲೂರು ತಾಲೂಕಿನ ಚಿಕ್ಕ ತಿರುಪತಿಯ ಲಕ್ಕೂರು ಸಮೀಪದ ಕಡೂರು ಮೂಲದ ಪತಿ ಅರುಣ್(30) ಕೊಲೆ ಮಾಡಿರುವ ಆರೋಪಿ. ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಮೂಲದ ಮಹಿಳೆ ಯೋಗಶ್ರೀ ಕೊಲೆಯಾದ ಗೃಹಿಣಿ. ಪರಸ್ಪರ ಪ್ರೀತಿಸಿ ಮದುವೆಯಾದ ಇವರಿಗೆ ಒಂದು ಮಗುವಿತ್ತು. ಆದರೆ ಮದುವೆ ವಿಚಾರ ಗುಟ್ಟಾಗಿದ್ದು, ಬಹಳ ವರ್ಷಗಳ ನಂತರ ಬಹಿರಂಗಗೊಂಡಿತ್ತು. ಬಾಡಿಗೆ ಮನೆಯಲ್ಲಿ ವಾಸವಿದ್ದ ಪತಿ ಹಾಗೂ ಪತ್ನಿಯ ನಡುವೆ ಪ್ರತಿದಿನ ವಿನಾಕಾರಣ ಜಗಳ ನಡೆಯುತ್ತಿತ್ತು. 20 ದಿನಗಳ ಹಿಂದೆ ಬಾಡಿಗೆ ಮನೆಯೊಂದಕ್ಕೆ ಬಂದಿದ್ದರು.
ಆನೇಕಲ್ ತಾಲೂಕಿನ ಸಮಂದೂರು ಗ್ರಾಮದ ತೋಟವೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದ ದಂಪತಿ ನಡುವೆ ಹಲವು ಬಾರಿ ನ್ಯಾಯ ಪಂಚಾಯ್ತಿ ನಡೆದಿದ್ದವು. ಪತ್ನಿಯ ಕೊಲೆ ಮಾಡಿದ ಆರೋಪಿ ಪತಿ ಪೊಲೀಸರಿಗೆ ತಾನೇ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿ ಆರೋಪಿ ಪತಿಯನ್ನು ಬಂಧಿಸಿ ಮಾಡಿ ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.