ಬೆಂಗಳೂರು: ನಗರದ ಪರಪ್ಪನ ಅಗ್ರಹಾರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಪರಿಚಿತ ವ್ಯಕ್ತಿಯೇ ಕಟ್ಟಿಗೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ನೆಡೆದಿದೆ.
ಯಾದಗಿರಿ ಮೂಲದ ಪರಪ್ಪನ ಅಗ್ರಹಾರದ ನಿವಾಸಿ ಫಿರ್ಮಾ (38) ಹತ್ಯೆಯಾದ ಮಹಿಳೆ. ಆರೋಪಿ ಮೆಹಬೂಬ್ (45) ತಲೆಮರೆಸಿಕೊಂಡಿದ್ದಾನೆ. ಕಳೆದ 12 ವರ್ಷಗಳ ಹಿಂದೆ ಪತಿ ಕಳೆದುಕೊಂಡ ಫಿರ್ಮಾ, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಈಕೆಗೆ ಇಬ್ಬರು ಮಕ್ಕಳಿದ್ದು, ಮಗ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ.
ತನ್ನ ಊರಾದ ಯಾದಗಿರಿಯಲ್ಲಿ ಈಕೆಗೆ ಪರಿಚಯವಾಗಿದ್ದ ಮೆಹಬೂಬ್ ಆಗಾಗ ಪರಪ್ಪನ ಅಗ್ರಹಾರದ ಬಳಿಯಲ್ಲಿರುವ ಫಿರ್ಮಾ ಮನೆಗೆ ಭೇಟಿ ಕೊಡುತ್ತಿದ್ದ. ಶನಿವಾರ ಸಂಜೆ ಎಂದಿನಂತೆ ಈಕೆಯ ಮನೆಗೆ ಬಂದಿದ್ದ ಆರೋಪಿ ಮೆಹೆಬೂಬ್, ಕ್ಷುಲ್ಲಕ ಕಾರಣಕ್ಕೆ ಫಿರ್ಮಾ ಜತೆ ಜಗಳ ಮಾಡಿಕೊಂಡಿದ್ದ. ಜಗಳ ತಾರಕಕ್ಕೇರಿ ಮನೆಯಲ್ಲಿದ್ದ ಕಟ್ಟಿಗೆಯಿಂದ ಆಕೆಯ ತಲೆಗೆ ಹೊಡೆದಿದ್ದಾನೆ. ಈ ವೇಳೆ ತೀವ್ರ ಗಾಯಗೊಂಡ ಫಿರ್ಮಾ ಸಾವನ್ನಪ್ಪಿದ್ದಾರೆ.
ಫಿರ್ಮಾ ಪುತ್ರ ಕೆಲಸ ಮುಗಿಸಿಕೊಂಡು ರಾತ್ರಿ ಮನೆಗೆ ಬಂದಾಗ ತಾಯಿ ಮೃತಪಟ್ಟಿರುವುದನ್ನು ನೋಡಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.