ಬೆಂಗಳೂರು: ನನ್ನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಇಲ್ಲವಾದಲ್ಲಿ ಮನೆಗೆ ಕರೆದುಕೊಂಡು ಹೋಗಿ. ನನಗೆ ಉಸಿರಾಡಲು ತುಂಬಾ ಕಷ್ಟವಾಗ್ತಿದೆ ಎಂದು ಸಾಯುವ ಮುನ್ನ ವ್ಯಕ್ತಿಯೊಬ್ಬ ಬಿಕ್ಕಿ ಬಿಕ್ಕಿ ಅತ್ತಿರುವ ಮನಕಲಕುವ ಘಟನೆ ನಗರದಲ್ಲಿ ನಡೆದಿದೆ. ನಗರ್ತ ಪೇಟೆಯ 50 ವರ್ಷದ ವ್ಯಕ್ತಿ ಚಕಿತ್ಸೆ ವಿಳಂಬವಾಗಿದ್ದರಿಂದ ಮೃತಪಟ್ಟಿದ್ದಾರೆ.
ತೀವ್ರ ಉಸಿರಾಟದ ತೊಂದರೆ ಹಾಗೂ ಮೂಗಿನಲ್ಲಿ ರಕ್ತ ಸೋರಿಕೆಯಿಂದ ಕೂಡಲೇ ಆತನನ್ನ ಕನ್ನಿಂಗ್ಹ್ಯಾಮ್ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ವೆಂಟಿಲೇಟರ್ ಇಲ್ಲ, ಬೆಡ್ ಇಲ್ಲವೆಂದು ಸತಾಯಿಸಿದ್ದಾರೆ ಎನ್ನಲಾಗ್ತಿದೆ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದರು ಎಂದು ಆರೋಪಿಸಲಾಗಿದೆ.
ತೀವ್ರ ಉಸಿರಾಟದ ತೊಂದರೆ ಇದ್ದುದರಿಂದ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದ್ರೆ ಮೊದಲು ಕೋವಿಡ್ ಟೆಸ್ಟ್ ಮಾಡಿಸಿ, ನಂತರ ಅಡ್ಮಿಟ್ ಮಾಡಿಕೊಳ್ಳುತ್ತೇವೆ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದರು. ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಲು ಕರೆದೊಯ್ದಿದ್ದಾರೆ. ಅದರ ವರದಿ ಬರುವುದು ತಡವಾಗಿ, ಅಡ್ಮಿಟ್ ಮಾಡಿಸಿಕೊಳ್ಳುವ ಪ್ರಕ್ರಿಯೆ ವಿಳಂಬವಾದ ಕಾರಣ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ.
ಸರಿಯಾದ ಚಿಕಿತ್ಸೆ ಸಿಗದೇ ವ್ಯಕ್ತಿ ಸಾವನ್ನಪ್ಪಿದ್ದು, ರೋಗಿಯ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ, ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ರೋಗಿಯ ಗಂಟಲು ದ್ರವ ಪರೀಕ್ಷೆ ಈಗಾಗಲೇ ನಡೆಸಿದ್ದು, ಆಸ್ಪತ್ರೆಯವರು ವರದಿಯನ್ನು ಬಹಿರಂಗಪಡಿಸಿಲ್ಲ.