ಬೆಂಗಳೂರು: ಕ್ರೆಡಿಟ್ ಕಾರ್ಡ್ ಕಂಪೆನಿಗಳು ಮಾನಸಿಕ ಕಿರುಕುಳ ನೀಡುತ್ತಿವೆ ಎಂದು ಡೆತ್ ನೋಟ್ ಬರೆದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಶಿಧರ್ ಮೃತಪಟ್ಟ ವ್ಯಕ್ತಿ. ಇವರು ಮಂಗಳೂರಿನವರಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶಶಿ, ಶೋಭಾ ಎಂಬಾಕೆಯ ಜೊತೆ ಮದುವೆಯಾಗಿದ್ದರು. ದಂಪತಿಗೆ ಮುದ್ದಾದ ಎರಡು ಮಕ್ಕಳಿದ್ದರು. ಎಲ್ಲವು ಸರಿಯಾಗಿದೆ ಅಂದುಕೊಂಡಿದ್ದ ಸಮಯದಲ್ಲಿ ಲಾಕ್ಡೌನ್ ಜಾರಿಯಾಗಿತ್ತು. ಪರಿಣಾಮ ಇವರು ಕೆಲಸ ಮಾಡ್ತಿದ್ದ ಪ್ರಿಂಟಿಂಗ್ ಪ್ರೆಸ್ ಸಹ ಮುಚ್ಚಿತ್ತು. ಕೆಲಸ ಇಲ್ಲದೆ ಕೈಯಲ್ಲಿ ಹಣ ಇಲ್ಲದೆ ತನ್ನ ಬಳಿ ಇದ್ದ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಜೀವನ ನಡೆಸಿದ್ದರು. ಆದರೀಗ ಅದೇ ಕ್ರೆಡಿಟ್ ಕಾರ್ಡ್ಗಳಿಂದ ಪಡೆದಿದ್ದ ಸಾಲ ವಾಪಸ್ ಕಟ್ಟಲಾಗದೆ ಅತ್ಮಹತ್ಯೆಗೆ ಶರಣಾಗಿದ್ದಾರೆ.
ಬಜಾಜ್ ಹೌಸಿಂಗ್ ಫೈನಾನ್ಸ್, ಹೆಚ್ಡಿಎಫ್ಸಿ ಸೇರಿದಂತೆ ಐದಾರು ಬ್ಯಾಂಕ್ ಗಳಿಗೆ ಸೇರಿದ್ದ ಕ್ರೆಡಿಟ್ ಕಾರ್ಡ್ಗಳನ್ನ ತಾನು ಪ್ರಿಂಟಿಂಗ್ ಪ್ರೆಸ್ ನಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿರುವಾಗಲೇ ಪಡೆದಿದ್ದ ಶಶಿಧರ್, ಅವಶ್ಯಕತೆ ಇದ್ದಾಗ ಸಾಲ ಪಡೆದು ಮತ್ತೆ ತೀರಿಸುತ್ತಿದ್ದರು. ಆದರೆ, ಕಳೆದ ಕೆಲ ದಿನಗಳಿಂದ ಆರ್ಥಿಕ ಸಮಸ್ಯೆ ಆಗಿದ್ದ ಕಾರಣ ಬಜಾಜ್ ಹೌಸಿಂಗ್ ಪೈನಾನ್ಸ್ ನಿಂದ ಪಡೆದಿದ್ದ ಸಾಲವನ್ನು ವಾಪಸ್ ಕೊಟ್ಟಿರಲಿಲ್ಲ. ಹೀಗಾಗಿ ಪದೇ ಪದೆ ಫೈನಾನ್ಸ್ ಕಂಪೆನಿಯವರು ಕರೆ ಮಾಡಿ ಹಣ ಕಟ್ಟುವಂತೆ ದುಂಬಾಲು ಬಿದ್ದಿದ್ದರು ಎನ್ನಲಾಗಿದೆ.
ಹಣ ಇಲ್ಲ, ತಾಯಿ ಮೃತರಾಗಿದ್ದಾರೆ, ಹೀಗಾಗಿ ಕೆಲ ದಿನಗಳ ಅವಕಾಶ ಬೇಕು ಎಂದು ಮನವಿ ಮಾಡಿದ್ದರೂ, ಕೇಳದ ಕಂಪೆನಿಯವರು ಹಣ ನೀಡುವಂತೆ ಮಾನಸಿಕ ಹಿಂಸೆ ನೀಡುತ್ತಿದ್ದರಿಂದ ಬೇಸತ್ತ ಶಶಿಧರ್ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ.
ಸದ್ಯ ಡೆತ್ ನೋಟ್ ಆಧಾರದಲ್ಲಿ ಕುಟುಂಬದವರು ಈಗ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಕೇಸ್ ದಾಖಲು ಮಾಡಿಕೊಂಡಿರುವ ಠಾಣಾ ಸಿಬ್ಬಂದಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ಹಳೆಯ ಐಸ್ ಪ್ಲ್ಯಾಂಟ್ನಲ್ಲಿ ಅಮೋನಿಯಾ ಸೋರಿಕೆ : ಕೆಲ ಕಾಲ ಆತಂಕ ಸೃಷ್ಟಿ