ಆನೇಕಲ್: ನಿವೃತ್ತ ಇನ್ಸ್ಪೆಕ್ಟರ್ ಎಂದು ನಂಬಿಸಿ ಬಾರ್ ಹುಡುಗರ ಬಳಿ ಲಕ್ಷಗಟ್ಟಲೆ ಹಣ ಪಡೆದು ಪರಾರಿಯಾಗಿರುವ ವ್ಯಕ್ತಿಯ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆನೇಕಲ್ ಸುಣವಾರ ಬಾರ್‌ನಲ್ಲಿ ತಿಂಗಳುಗಟ್ಟಲೆ ರೂಂ ಬುಕ್ ಮಾಡಿ ಬಾರಿನ ಹುಡುಗರಷ್ಟೇ ಅಲ್ಲದೆ ಸುತ್ತಲ ಪರಿಚಯಸ್ಥ ನಿರುದ್ಯೋಗಿ ಯುವಕರಿಗೆ ಅವರ ಬೇಡಿಕೆಗಳಿಗೆ ಅನುಗುಣವಾಗಿ ಆಮಿಷವೊಡ್ಡಿದ್ದಾನೆ. ಬಳಿಕ ಲಕ್ಷಾಂತರ ಹಣ ಪಡೆದು ಸಿಕ್ಕಿಬಿದ್ದು, ಮರುದಿನ ವಾಪಸ್ ಮಾಡುವುದಾಗಿ ಹೇಳಿ ತಡರಾತ್ರಿಯೇ ಪರಾರಿಯಾಗಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿದೆ.
ದೊಡ್ಡಬಳ್ಳಾಪುರ ಮೂಲದ ಜ್ಞಾನಮೂರ್ತಿ.ಎಲ್ ಎಂಬುವವನೇ ವಂಚಿಸಿದ ಆರೋಪಿ. ತಾನೊಬ್ಬ ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್. ಈ ಕಡೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಂದಿದ್ದೇನೆ. ತನ್ನ ಕೋಟಾದಲ್ಲಿ ಇಬ್ಬರಿಗೆ ಪೊಲೀಸ್ ಕೆಲಸ ಕೊಡಿಸುವ ಅವಕಾಶವಿದೆ ಎಂದು ಯುವಕನೊಬ್ಬನಿಂದ 30 ಸಾವಿರ ರೂಪಾಯಿ ಪಡೆದಿದ್ದಾನೆ. ಮಂಡ್ಯ ಮೂಲದ ಆನಂದ್ ಎಂಬುವವರಿಗೂ ಪೊಲೀಸ್ ಉದ್ಯೋಗ ಕೊಡಿಸುವ ಭರವಸೆ ನೀಡಿ ಹಣ ಪಡೆದಿದ್ದ. ಗೊಲ್ಲಹಳ್ಳಿಯ ರವಿ ಎಂಬವರಿಗೆ ವ್ಯಾಪಾರಕ್ಕಾಗಿ ಮೈಸೂರು ಕುದುರೆ ಗಾಡಿ ಕೊಡಿಸುವುದಾಗಿ 75 ಸಾವಿರ ರೂಪಾಯಿ ಪಡೆದಿದ್ದಾನೆ.
ಇವೆಲ್ಲವೂ ಸ್ನೇಹಿತರ ನಡುವೆಯೇ ನಡೆದ ವ್ಯವಹಾರವಾಗಿದ್ದು ದಿನೇದಿನೇ ಅನುಮಾನ ಶುರುವಾಗಿ ಜ್ಞಾನ ಮೂರ್ತಿಯ ಹಿನ್ನಲೆ ಪತ್ತೆಗಾಗಿ ಬೆನ್ನುಬಿದ್ದ ಯುವಕರಿಗೆ ವಂಚನೆಯ ಅರಿವಾಗಿದೆ. ನಂತರ ಅವರು ಆನೇಕಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ವಿವಾಹಿತ - ವಿಚ್ಛೇದಿತ ಮಹಿಳೆಯರೇ ಟಾರ್ಗೆಟ್: 11 ಜನರ ಮದುವೆಯಾದ ಆಸಾಮಿ!