ಬೆಂಗಳೂರು: ಕಂಠಪೂರ್ತಿ ಕುಡಿದು ಪತ್ನಿಯನ್ನು ಸಾಯಿಸಲು ಯತ್ನಿಸಿದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪತಿ ವಿರುದ್ಧ ಆರ್.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಂಡತಿ ಸುಧಾರಾಣಿಯ ತಲೆಯನ್ನು ಗೋಡೆಗೆ ಗುದ್ದಿರುವ ಆರೋಪಿ ಪತಿ ಹರ್ಷ ಬಳಿಕ ಚಾಕುವಿನಿಂದ ಇರಿದುಕೊಂಡು ಸಾವಿಗೆ ಶರಣಾಗುವ ಪ್ರಯತ್ನ ಮಾಡಿದ್ದಾನೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಕರಣದ ವಿವರ: ತುಮಕೂರು ಮೂಲದ ಹರ್ಷ ಮತ್ತು ಆತನ ಪತ್ನಿ ಸುಧಾರಾಣಿ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು. ಆರ್.ಆರ್.ನಗರದಲ್ಲಿ ದಂಪತಿ ವಾಸವಿದ್ದರು. 12 ವರ್ಷದ ಮಗನಿದ್ದಾನೆ. ಇತ್ತೀಚೆಗೆ ತುಮಕೂರಿನಲ್ಲಿ ಜಮೀನು ಮಾರಿದ ಹಣ ಕೈ ಸೇರಿದ ಬಳಿಕ ಸಂಪೂರ್ಣವಾಗಿ ಬದಲಾಗಿದ್ದ ಹರ್ಷ ಲಕ್ಷ ಲಕ್ಷ ರೂಪಾಯಿ ಸಂಬಳ ಬರುವ ಕೆಲಸ ಬಿಟ್ಟು ಕುಡಿತದ ದಾಸನಾಗಿದ್ದನಂತೆ.
ಕಳೆದ ಐದಾರು ತಿಂಗಳಿಂದ ಕೆಲಸಕ್ಕೆ ಹೋಗದೆ ಕಂಠಪೂರ್ತಿ ಕುಡಿದು ಮನೆಯಲ್ಲಿಯೇ ಇರುತ್ತಿದ್ದನಂತೆ. ಹೆಂಡತಿ ಜತೆ ಜಗಳ ಮಾಡಿ ಸೈಕೋ ರೀತಿ ವರ್ತಿಸುತ್ತಿದ್ದನಂತೆ. ಇದರಿಂದ ಬೇಸತ್ತ ಪತ್ನಿ ಸುಧಾರಾಣಿ, 'ಕುಡಿತ ಬಿಟ್ಟು ಕೆಲಸಕ್ಕೆ ಹೋಗಿ' ಎಂದು ಬುದ್ಧಿವಾದ ಹೇಳಿದ್ದಾಳೆ. ಮಾ. 17ರಂದು ಮತ್ತೆ ಇಬ್ಬರ ನಡುವೆ ಗಲಾಟೆ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಹರ್ಷ ತನ್ನ ಹೆಂಡತಿಯನ್ನು ಗೋಡೆಗೆ ಗುದ್ದಿ ಕೊಲೆಗೆ ಯತ್ನಿಸಿದ್ದಾನೆ. ಬಳಿಕ ತಾನೂ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಂದೆಯ ವಿಕೃತಿಗೆ ಭಯಬಿದ್ದ ಮಗ ಮನೆಯಿಂದ ಓಡಿ ಬಂದಿದ್ದಾನೆ. ಸುಧಾರಾಣಿ ಸಹೋದರ ನೀಡಿರುವ ದೂರಿನ ಅನ್ವಯ ಆರ್.ಆರ್.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ದಂಪತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣದ ತನಿಖೆ ಮುಂದುವರೆದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮಾಹಿತಿ ನೀಡಿದ್ದಾರೆ.
ಪತಿ ನಾಪತ್ತೆ: ಪ್ರೀತಿಸಿ ಮದುವೆಯಾದ ಮೂರೇ ದಿನದ ಅಂತರದಲ್ಲಿ ಪತಿ ತನ್ನಿಂದ ದೂರವಾಗಿದ್ದಾನೆ ಎಂದು ಆರೋಪಿಸಿ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪತಿ ಸುರೇಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಧರಣಿ ಎಂಬಾಕೆ ಕೆ.ಆರ್.ಪುರ ಠಾಣೆಗೆ ದೂರು ನೀಡಿ ಒತ್ತಾಯಿಸಿದ್ದಾರೆ. "ಕೆಲವು ವರ್ಷಗಳಿಂದ ನಾನು ಸುರೇಶ್ ಪ್ರೀತಿಸುತ್ತಿದ್ದೆವು. ಫೆ.13 ರಂದು ದೇವಸ್ಥಾನವೊಂದರಲ್ಲಿ ಮದುವೆಯಾದೆವು. ವಿವಾಹವಾದ ಮೂರು ದಿನಗಳ ಬಳಿಕ ಅಂದರೆ ಫೆ. 17 ರಂದು ನನ್ನ ಬಿಟ್ಟು ದೂರವಾಗಿದ್ದಾನೆ. 18 ರಂದು ಮನೆಗೆ ಬಂದು ಕರೆದುಕೊಂಡು ಹೋಗಿರುವುದಾಗಿ ಭರವಸೆ ನೀಡಿದ್ದ ಸುರೇಶ್ ಈವರೆಗೂ ಪತ್ತೆಯಾಗಿಲ್ಲ." ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ಪತಿ ನಾಪತ್ತೆ! ಪೊಲೀಸರಿಗೆ ದೂರು ನೀಡಿದ ಪತ್ನಿ
ನಾಲ್ವರಿಂದ ಆತ್ಮಹತ್ಯೆ ಯತ್ನ: ನೀರಿನ ಟ್ಯಾಂಕ್ ಕಟ್ಟಲು ನಿರ್ಮಾಣ ಹಂತದ ಮನೆಯ ತಡೆಗೋಡೆ ಕೆಡವಿದ್ದರಿಂದ ಮನನೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳ್ಳಾರಿ ತಾಲೂಕಿನ ಕಮ್ಮರಚೇಡು ಗ್ರಾಮದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ರಾಜೇಶ್, ಶೇಖಪ್ಪ, ಸುಶೀಲಮ್ಮ ಮತ್ತು ಜ್ಯೋತಿ ಆತ್ಮಹತ್ಯೆಗೆ ಯತ್ನಿಸಿದವರು. ನಾಲ್ವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆ ಯತ್ನ