ಬೆಂಗಳೂರು: ಮೋದಿ ಸಾಹೇಬ್ರು, ನಡ್ದಾ ಸಾಹೇಬ್ರು, ಅಮಿತ್ ಶಾ ಸಾಹೇಬ್ರು ಹೇಳಿಕೆ ಕೊಟ್ರೆ, ಅದಕ್ಕೆ ಪ್ರತಿಕ್ರಿಯೆ ಕೊಡ್ತೇನೆ, ಯತ್ನಾಳ್ ಹೇಳಿಕೆಗೆಲ್ಲಾ ನಾನು ಉತ್ತರ ಕೊಡಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಬಸವನಗುಡಿ ಕೈ ಅಭ್ಯರ್ಥಿ ಪರ ಪ್ರಚಾರ ನಡೆಸಿ ಬಳಿಕ ಮಾತನಾಡಿದ ಅವರು, ಸೋನಿಯಾ ಗಾಂಧಿ ಬಗ್ಗೆ ಯತ್ನಾಳ್ ವಿಷ ಕನ್ಯೆ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಯಾರೋ ಯತ್ನಾಳ್ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಯತ್ನಾಳ್ ರಾಜ್ಯ ಮಟ್ಟದ ನಾಯಕ ಅಷ್ಟೇ. ಮೋದಿ ಸಾಹೇಬ್ರು, ನಡ್ದಾ ಸಾಹೇಬ್ರು, ಅಮಿತ್ ಶಾ ಸಾಹೇಬ್ರು ಹೇಳಿಕೆ ಕೊಟ್ರೆ, ಅದಕ್ಕೆ ಪ್ರತಿಕ್ರಿಯೆ ಕೊಡ್ತೇನೆ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗಲಭೆಗಳು ಆಗುತ್ತವೆ ಅನ್ನೋ ಅಮಿತ್ ಶಾ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಈಗಾಗಲೇ ನಾವು ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇವೆ. FIR ದಾಖಲು ಮಾಡುವಂತೆಯೂ ಆಗ್ರಹ ಮಾಡಿದ್ದೇವೆ. ನಮ್ಮ ಸರ್ಕಾರ ಇದ್ದಾಗ ಎಷ್ಟು ಗಲಭೆಗಳು ಆಗಿವೆ?. ಬಿಜೆಪಿ ಸರ್ಕಾರ ಬಂದ ಮೇಲೆ ಎಷ್ಟು ಗಲಭೆಗಳು ಆಗಿವೆ ಅನ್ನೋದು ಗೊತ್ತಿದೆ ಎಂದು ತಿರುಗೇಟು ನೀಡಿದರು. ಕೊರಟಗೆರೆಯಲ್ಲಿ ಪರಮೇಶ್ವರ್ ಪ್ರಚಾರದ ವೇಳೆ ಕಲ್ಲು ತೂರಾಟ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಒಬ್ಬ ಅಭ್ಯರ್ಥಿಗೆ ಹೀಗೆ ಬೆದರಿಕೆ ಹಾಕುವುದು ಸರಿಯಲ್ಲ. ನಾನು ಇದನ್ನ ಖಂಡಿಸುತ್ತೇನೆ, ಹೀಗೆ ಮಾಡೋದ್ರಿಂದ ವೋಟ್ ಬೀಳೋದಿಲ್ಲ. ಜನ ಬಹಳ ಜಾಣರಿದ್ದಾರೆ, ಪರಮೇಶ್ವರ್ ಕಳೆದ ಬಾರಿಗಿಂತ ಹೆಚ್ಚಿನ ಮತಗಳಿಂದ ಗೆದ್ದು ಬರ್ತಾರೆ ಎಂದರು.
ಲೂಟೋ ಔರ್ ಬಾಟೋ ಸರ್ಕಾರ: ಬಸವನಗುಡಿ ಪ್ರಚಾರ ವೇಳೆ ಮಾತನಾಡಿದ ಖರ್ಗೆ, ಬಿಜೆಪಿ ಸರ್ಕಾರ ಲೂಟೋ ಔರ್ ಬಾಟೋ ಸರ್ಕಾರ ಆಗಿದೆ. ಇವತ್ತಿನ ಸರ್ಕಾರದ ಬಗ್ಗೆ ಎಲ್ಲೇ ಹೋಗಿ ಕೇಳಿದ್ರು ಹೇಳೋದು, ಶೇ.40 ಕಮಿಷನ್ ಸರ್ಕಾರ ಅಂತ. ರಸ್ತೆ, ಮೋರಿ, ಜಾಬ್ ಯಾವುದೇ ಕಾಮಗಾರಿಗೆ ಪರ್ಮಿಷನ್ ತೆಗೆದುಕೊಳ್ಳಲು ಹಣ ಕೊಡಬೇಕು. ಗುತ್ತಿಗೆದಾರರು ಕಮಿಷನ್ನಿಂದ ಬೇಸತ್ತು, ಪ್ರಧಾನಿ ಮೋದಿ, ಶಾ, ಲೋಕಾಯುಕ್ತ ಎಲ್ಲರಿಗೂ ಪತ್ರ ಬರೆದರೂ ಪ್ರಯೋಜನ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೋದಿ ನಾನು ತಿನ್ನೋದಿಲ್ಲ, ತಿನ್ನಲು ಬಿಡೋದಿಲ್ಲ ಅಂತಾರೆ. ಮೋದಿ ಅವರ ಪಕ್ಕದಲ್ಲಿ ಇರೋರೆ ತಿಂತಾರೆ. ವಿರೂಪಾಕ್ಷಪ್ಪ ಮನೆಯಲ್ಲಿ 8 ಕೋಟಿ ಸಿಕ್ತು. ವಿರೂಪಾಕ್ಷಪ್ಪ ನನ್ನ ಯಾಕೆ ಜೈಲಿಗೆ ಹಾಕಲಿಲ್ಲ. ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹ ಮಾಡಿ ಅವರ ಶಕ್ತಿ ಕುಗ್ಗಿಸುವ ಕೆಲಸ ಮಾಡಿದ್ರು. ಯುಪಿ ಯೋಗಿ ಬಂದು ಇಲ್ಲಿ ಹೇಳ್ತಾರೆ. ಡಬಲ್ ಇಂಜಿನ್ ಸರ್ಕಾರ ನಾವು ಅಭಿವೃದ್ಧಿ ಮಾಡಿದ್ದೀವಿ ಅಂತಾರೆ. ನಮ್ಮ ರಾಜ್ಯಕ್ಕೆ ಯೋಗಿ ಅವರ ಕೊಡುಗೆ ಏನು. ಎಲ್ಲಾ ನಾವೇ ಅಭಿವೃದ್ಧಿ ಮಾಡಿದ್ದು ಅಂತಾರೆ ಬಿಜೆಪಿ. ದೇಶ ರಾಜ್ಯ ಇಷ್ಟು ಅಭಿವೃದ್ಧಿಯಾಗಿರೋದು ಕಾಂಗ್ರೆಸ್ ಸರ್ಕಾರದಲ್ಲಿ ಎಂದರು.
ನಿರುದ್ಯೋಗ ಸಮಸ್ಯೆ ಬಗೆಹರಿಸಲು ಮೋದಿ ಸರ್ಕಾರ ವಿಫಲವಾಗಿದೆ. ಬಡವರಿಗೆ ಕೆಲಸ ಸಿಗಬಾರದು ಅನ್ನೋದು ಮೋದಿ ಸರ್ಕಾರದ ಉದ್ದೇಶ. ಗಾಳಿ ಬಿಟ್ಟು ಎಲ್ಲದರ ಮೇಲೂ GST ಹಾಕಿದೆ ಬಿಜೆಪಿ ಸರ್ಕಾರ. ನಮ್ಮ ಕಾಂಗ್ರೆಸ್ ಪಕ್ಷದ ಹೋರಾಟ ವಿಚಾರಧಾರೆ ಮೇಲೆ ಇದೆ. ಅದಕ್ಕಾಗಿ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದ್ರು. ರಾಹುಲ್ ಗಾಂಧಿ ಶಕ್ತಿ ಕುಗ್ಗಿಸಲು, ಸಂಸದ ಸ್ಥಾನದಿಂದ ಅನರ್ಹ ಮಾಡಿದ್ರು. ಸಂವಿಧಾನದ ಆಶಯಕ್ಕೆ ಬಿಜೆಪಿ ವಿರೋಧಿಯಾಗಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಳ್ಳಾರಿಯನ್ನು ದೇಶದ ಜೀನ್ಸ್ ರಾಜಧಾನಿ ಮಾಡುತ್ತೇವೆ : ರಾಹುಲ್ ಗಾಂಧಿ