ಬೆಂಗಳೂರು: ನನಗೆ ಈ ಹಿಂದೆಯೂ ಇದೇ ರೀತಿಯ ಬೆದರಿಕೆ ಕರೆ ಬಂದಿತ್ತು. ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿದ್ದಾಗ ಬೆದರಿಕೆ ಕರೆ ಮಾಡಿದ್ದರು ಎಂದು ಮಾಜಿ ಸಂಸದ ಹಾಗೂ ರಾಜ್ಯಸಭೆಯ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಲೋಕಸಭೆ ಸ್ಪೀಕರ್, ಗೃಹ ಸಚಿವರ ಗಮನಕ್ಕೆ ತಂದಿದ್ದೆ. ತುಘಲಕ್ ರಸ್ತೆಯಲ್ಲಿರುವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಈ ಬಗ್ಗೆ ಲೋಕಸಭೆ ಸ್ಪೀಕರ್, ಪ್ರಧಾನಿಯವರ ಗಮನಕ್ಕೂ ತಂದಿದ್ದೇನೆ. ಇದರ ಕುರಿತು ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ತನಿಖೆ ನಡೆಯುತ್ತಿದೆ ಎಂದರು.
ನಂತರ ಮಾತನಾಡಿ, ಜೂನ್ 7ರ ಮಧ್ಯರಾತ್ರಿ 1.30ಕ್ಕೆ ಲ್ಯಾಂಡ್‌ಲೈನ್‌ಗೆ ಕರೆ ಬಂದಿದೆ. ಅದೇ ರೀತಿಯಲ್ಲಿ ಬೈಗುಳದ ಭಾಷೆಯಲ್ಲಿ ಮಾತಾಡಿದ್ದಾರೆ. ಪ್ರಿಯಾಂಕ್ ಖರ್ಗೆಗೂ ಏಳೆಂಟು ಬಾರಿ ಕರೆಗಳು ಬಂದಿವೆ. ಕಾಲ್ ಡಿಟೇಲ್ಸ್ ಪಡೆಯಲು ಪ್ರಿಯಾಂಕ್ಗೆ ಹೇಳಿದ್ದೇನೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಪದಗ್ರಹಣಕ್ಕೆ ಸರ್ಕಾರ ಅನುಮತಿ ತಿರಸ್ಕರಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಪದಗ್ರಹಣ ಕಾರ್ಯಕ್ರಮ ಮಾಡ್ತೀವಿ ಅಂದರೂ ಅನುಮತಿ ನಿರಾಕರಣೆ ಮಾಡೋದು ಸರಿಯಲ್ಲ. ನ್ಯಾಯದ ವಿಚಾರದಲ್ಲಿ ಪಕ್ಷಪಾತ ಮಾಡುವುದು ಬೇಡ. ಅಮಿತ್ ಶಾ ಕಾರ್ಯಕ್ರಮ ಮಾಡಬಹುದು, ಆದ್ರೆ ನಾವು ಮಾಡುವಂತಿಲ್ಲ. ಪಶ್ಚಿಮ ಬಂಗಾಳ ಮತ್ತು ದೆಹಲಿಯಲ್ಲಿ ರ್ಯಾಲಿಗೆ ಅವಕಾಶ ಕೊಟ್ಟಿದ್ದಾರೆ. ಇದು ಯಾವ ರೀತಿಯ ನ್ಯಾಯ? ಎಂದು ಪ್ರಶ್ನಿಸಿದರು.
ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ. ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ಪದಗ್ರಹಣಕ್ಕೆ ಅವಕಾಶ ಕೊಡಬೇಕು. ಅವಕಾಶ ನಿರಾಕರಣೆ ನೋಡಿದ್ರೆ ಇದು ರಾಜಕೀಯ ಪ್ರೇರಿತ ಅನ್ನಿಸುತ್ತೆ ಎಂದರು.
ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಜೂನ್ 7 ನೇ ತಾರೀಖಿನಂದು ನನಗೆ ಹಾಗೂ ಖರ್ಗೆ ಅವರಿಗೆ ದೂರವಾಣಿ ಮೂಲಕ ಬೆದರಿಕೆ ಕರೆ ಬಂತು. ಈ ಬಗ್ಗೆ ಪೊಲೀಸ್ ಕಮಿಷನರ್‌ಗೆ ನಾನು ದೂರು ಕೊಟ್ಟಿದ್ದೇನೆ, ಬೊಮ್ಮಾಯಿ ಅವರಿಗೆ ಕೂಡ ದೂರು ಕೊಡಲಿದ್ದೇನೆ. ಈ ಹಿಂದೆ ಕೆನಡಾದಿಂದ ಕರೆ ಬಂದಿತ್ತು ಎಂದು ಮಾಹಿತಿ ಇತ್ತು. ಕೆಲವೊಂದು ಕರೆಗಳಿಗೆ ಕಾಲ್ ರೆಕಾರ್ಡ್ ಇರುವುದಿಲ್ಲ. ಉನ್ನತ ಮಟ್ಟದ ತನಿಖೆಗೆ ನಾವು ಪ್ರಯತ್ನ ಮಾಡುತ್ತೇವೆ ಎಂದ ಅವರು, ಇದರ ಹಿಂದೆ ಏನೋ ರಾಜಕೀಯ ಉದ್ದೇಶ ಇತ್ತು ಅನ್ನಿಸುತ್ತಿದೆ ಎಂದು ಹೇಳಿದರು.