ಬೆಂಗಳೂರು: ಮೋದಿ ಮುಂದೆ ನಿಂತು ಪರಿಹಾರ ಕೇಳಲು ಯಾರಿಗೂ ಧೈರ್ಯ ಇಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆರೆ ಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡ ಬಂದು ಹೋಗಿದೆ. ತಂಡದ ರಿಪೋರ್ಟ್ ವಿಳಂಬವಾದರೆ ಮಧ್ಯಂತರ ನೆರವು ನೀಡಬೇಕು. ಆದರೆ, ಮಧ್ಯಂತರ ಹಣವನ್ನೂ ಬಿಡುಗಡೆ ಮಾಡಿಲ್ಲ. ಬೆಂಗಳೂರಿಗೆ ಬಂದಾಗಲೂ ಮೋದಿ ಈ ಬಗ್ಗೆ ಮಾತಾಡಿಲ್ಲ. ಕೇಂದ್ರದ ಹಣಕಾಸು ಸಚಿವರು ನಮ್ಮವರು. ಅವರಿಂದಲೂ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಮೋದಿ ಮುಂದೆ ನಿಂತು ಪರಿಹಾರ ಹಣದ ಬಗ್ಗೆ ಕೇಳಲು ಯಾರಿಗೂ ಧೈರ್ಯ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಹಣಕಾಸು ಸಚಿವರು ಇಲ್ಲಿಂದಲೇ ಆಯ್ಕೆಯಾಗಿ ಹೋದವರು. ಅವರು ಕೂಡ ಯಾವುದೇ ನೆರವು ಘೋಷಿಸಿಲ್ಲ. ಇಲ್ಲಿಯವರೆಗೆ ಕೇಂದ್ರ ನೆರವಿನ ಬಗ್ಗೆ ಚಕಾರವೆತ್ತಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಸಹಾಯ ಕೇಳುತ್ತಿದ್ದು, ಇದರಿಂದ ಮುಜುಗರ ಒಳಗಾಗುವುದು ಏನು ಇಲ್ಲ. ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಬಿಜೆಪಿ ಸರ್ಕಾರವೇ ಇದೆ. ಹೀಗಿದ್ದರೂ ಯಾಕೆ ನೆರವು ಬರುತ್ತಿಲ್ಲ. ಪರಿಹಾರವೇ ಇಲ್ಲ ಅಂದರೆ, ಅಭಿವೃದ್ಧಿ ಕೆಲಸ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ನೆರೆ ಪರಿಹಾರ ವಿಚಾರದಲ್ಲಿ ಮೋದಿ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು ಎಂಬ ಸದಾನಂದಗೌಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿ, ಮೋದಿ, ಅಮಿತ್ ಶಾ ವಿರುದ್ಧ ಮಾತನಾಡಿದರೆ ದೇಶದ್ರೋಹಿಗಳು. ಕರ್ನಾಟಕದಲ್ಲಿ ಎಲ್ಲ ಜನ ನೆರೆ ಪರಿಹಾರ ಕೇಳುತ್ತಿದ್ದಾರೆ. ಹಾಗಾದ್ರೆ ಎಲ್ಲರೂ ದೇಶದ್ರೋಹಿಗಳಾ, ಗಾಂಧಿ ತತ್ತ್ವ- ಆದರ್ಶದ ಪರ ಮಾತನಾಡಿದರೆ ದೇಶದ್ರೋಹಿಗಳು. ಬಿಜೆಪಿ-ಆರ್ಎಸ್ಎಸ್ ಪರ ಮಾತನಾಡಿದರೆ ದೇಶಭಕ್ತರು ಎಂದು ಟಾಂಗ್ ನೀಡಿದರು.