ಬೆಂಗಳೂರು:ರೈಲ್ವೆ ಸಚಿವನಾಗಿದ್ದಾಗ ನನ್ನ ಪರಿಶ್ರಮದಿಂದ ತಂದ ಬೆಂಗಳೂರು-ಕೋಲಾರ ಕೋಚ್ ಫ್ಯಾಕ್ಟರಿಯನ್ನು ಈಗ ಬದಲಿಸುತ್ತಿರುವುದು ಸರಿಯಲ್ಲ ಎಂದು ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ನನ್ನ ಮತ ಕ್ಷೇತ್ರದ ಕಾರ್ಯಕ್ರಮಕ್ಕೂ ಗೈರಾಗಿ ಕೋಲಾರದ ಕೋಚ್ ಫ್ಯಾಕ್ಟರಿಗಾಗಿ ಕ್ಯಾಬಿನೆಟ್ ಸಭೆಯಲ್ಲಿ ಹಾಜರಾದೆ. ಈಗ ಕೇಂದ್ರದ ನಿರ್ಧಾರಕ್ಕೆ ನನ್ನ ವಿರೋಧವಿದೆ. ಮೋದಿ ನೇತೃತ್ವದ ಸರ್ಕಾರ ಹೊಸದೇನು ಕೊಟ್ಟಿಲ್ಲ. ಹೆಚ್ಚು ಅನುದಾನ ಕೊಡುವುದನ್ನ ಕಡಿತ ಮಾಡಿರುವುದು ಸರಿಯಲ್ಲ. ನಾನು ಮಂತ್ರಿ ಆಗಿದ್ದಾಗ ರಾಜ್ಯಕ್ಕೆ ಹೆಚ್ಚು ಅನುದಾನ ತಂದು ಕೊಟ್ಟಿದ್ದೇನೆ ಎಂದರು.
ಕಲಬುರ್ಗಿ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಿಲ್ಲ. ನಿಲ್ದಾಣ ಬರಲು ನಾನು ಕಾರಣ. ಕನಿಷ್ಠ ಕಾಳಜಿಗಾದರೂ ನನಗೆ ಆಹ್ವಾನ ಕೊಡಬಹುದಿತ್ತು. ಬಿಜೆಪಿ ಸರ್ಕಾರದಲ್ಲಿ ಗಡ್ಕರಿ ಒಬ್ಬರು ಎಲ್ಲರನ್ನೂ ಪರಿಗಣಿಸುತ್ತಾರೆ. ಆದರೆ, ಅವರಿಗೆ ಸ್ವಾತಂತ್ರ್ಯ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸಬ್ ಅರ್ಬನ್ ರೈಲು ಯೋಜನೆಗೆ ಒಂದು ಕೋಟಿ ಟೋಕನ್ ಹಣ ಕೊಟ್ಟಿದ್ದಾರೆ. ಇವರು ಕೊಟ್ಟಿರುವ ಹಣ ಸರ್ವೆ ಮಾಡುವುದಕ್ಕೂ ಆಗಲ್ಲ. ಹೊಸ ಯೋಜನೆ ಮಾಡುವ ಸಾಮರ್ಥ್ಯ ಇಲ್ಲ. ಹಳೆಯದನ್ನ ಮುಂದುವರೆಸುವ ಆಸಕ್ತಿಯೂ ಇಲ್ಲ. ನಾವು ಮಾಡಿದ್ದೇ ಅಂತಿಮ ಅನ್ನೋ ರೀತಿ ವರ್ತನೆ ಮಾಡ್ತಿದ್ದಾರೆ ಎಂದರು.
ನಾನು ರೈಲ್ವೆ ಮಿನಿಸ್ಟರ್ ಆಗಿದ್ದಾಗ ರಾಜ್ಯಕ್ಕೆ ಹಲವು ಯೋಜನೆ ತಂದಿದ್ದೆ. ಕೋಲಾರ- ಚಿಕ್ಕಬಳ್ಳಾಪುರ, ಹರಿಹರ ಕೊಟ್ಟೂರು,ಗದ್ವಾಲ್-ರಾಯಚೂರು,ಹುಬ್ಬಳ್ಳಿ- ಹೈದ್ರಾಬಾದ್, ಹುಬ್ಬಳ್ಳಿ-ಬೆಂಗಳೂರು ಹೊಸಲೈನ್ ಹೊಸ ರೈಲು ನೀಡಿದ್ದೆವು. ಮೈಸೂರು-ವಾರಣಾಸಿ ರೈಲಿಗೆ ಪ್ರಪೋಸಲ್ ಕೊಟ್ಟಿದ್ದೆವು. ಬೆಂಗಳೂರು-ವೈಷ್ಣೋದೇವಿ, ಬೆಂಗಳೂರು- ಆಜ್ಮೇರ್ ರೈಲಿಗೆ ಸಿಗ್ನಲ್ ಕೊಟ್ಟಿದ್ದೆವು. ನಾವು ಯಾವತ್ತೂ ಪ್ರಚಾರ ಬಯಸಲಿಲ್ಲ. ಆದರೆ, ಈಗ ನಾವು ಮಾಡಿರುವ ಯೋಜನೆಯನ್ನೇ ಬ್ರೇಕ್ ಮಾಡೋಕೆ ಹೊರಟಿದ್ದಾರೆ ಎಂದು ಕಿಡಿಕಾರಿದರು. ನರೇಗಾ ಯೋಜನೆಗೆ ಹಣ ಕಡಿಮೆ ನೀಡಿದ್ದಾರೆ. ರಾಜ್ಯಕ್ಕೆ 9 ಸಾವಿರ ಕೋಟಿ ಅನುದಾನ ನೀಡಬೇಕು. ಕೇಂದ್ರ ಆ ಹಣವನ್ನೂ ಕೊಟ್ಟಿಲ್ಲ. ರಾಜ್ಯ ಸರ್ಕಾರದ ಹಣದಿಂದಲೇ ಕೆಲಸಗಳಾಗಬೇಕಿದೆ. ರಾಜ್ಯ ಸರ್ಕಾರದಲ್ಲೂ ಹಣದ ಕೊರತೆಯಿದೆ. ಹೀಗಾಗಿ ಕೆಲವು ಶಾಸಕರಿಗಷ್ಟೇ ಅನುದಾನ ಸಿಗ್ತಿದೆ. ಕೆಲ ಶಾಸಕರಿಗೆ ನೂರು ಕೋಟಿ ನೀಡ್ತಾರೆ. ಮತ್ತೆ ಕೆಲವರ ಕ್ಷೇತ್ರಗಳಿಗೆ ಅನುದಾನವೇ ನೀಡ್ತಿಲ್ಲ. ಡಾ. ನಂಜುಂಡಪ್ಪ ವರದಿ ಸರಿಯಾಗಿ ಅನುಷ್ಠಾನವಾಗ್ತಿಲ್ಲ ಎಂದು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.
ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಅಂತಾ ಮಾಡಿದ್ದಾರೆ. ನೋಡೋಣ ಅದೆಷ್ಟು ಕಲ್ಯಾಣ ಮಾಡ್ತಾರೆ ಅಂತಾ ಎಂದ್ರು. ಹಣ ಬಿಡುಗಡೆಯನ್ನೇ ಮಾಡೋದಿಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಹೇಗೆ ಸಾಧ್ಯ? ಕೆಲವರು ಕೇಳುತ್ತಿದ್ದಂತೆ ಹಣವನ್ನ ಬಿಡುಗಡೆ ಮಾಡ್ತಾರೆ. ಕೆಲವರು ಅನುದಾನ ಕೇಳಿದ್ರೂ ಸರ್ಕಾರ ನೀಡ್ತಿಲ್ಲ. ಎಲ್ಲವೂ ಸಿಎಂ ಅಪ್ರೂವಲ್ ಆಗಬೇಕು. ಬಜೆಟ್ ಯಾಕೆ ಮಾಡ್ತೀರಾ? ಹಾಲಿನಲ್ಲಿ ಸ್ವಲ್ಪ ನೀರು ಹಾಕಿದ್ರೆ ಪರವಾಗಿಲ್ಲ. ನೀವು ನೀರಿಗೇ ಹಾಲು ಹಾಕಿದ್ರೆ ಇನ್ನೇನು ಮಾಡೋದು? ಈಗ ರಾಜ್ಯ ಸರ್ಕಾರ ಬಜೆಟ್ ಘೋಷಿಸಲಿದೆ. ಬೆಂಗಳೂರು ಸುತ್ತಮುತ್ತಲೇ ಯೋಜನೆ ಘೋಷಿಸೋದು ನಡೆಯುತ್ತೆ ಎಂದರು.