ಬೆಂಗಳೂರು: ಚಾಮರಾಜಪೇಟೆಯಲ್ಲಿ ಚಿಕ್ಕದೊಂದು ಖಾಸಗಿ ಫೈನಾನ್ಸ್ ಕಂಪನಿ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಮತ್ತೊಮ್ಮೆ ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬ ಕೂಗು ಕೇಳಿ ಬಂದಿದೆ. ಇಂದು ಸುರಾನಾ ಫೈನಾನ್ಸ್ ಹೆಸರಿನ ಕಂಪನಿಯ ಉದ್ಘಾಟನೆಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರನ್ನು ಅಭಿನಂದಿಸಲು ಆಗಮಿಸಿದ ಸ್ತ್ರೀಶಕ್ತಿ ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಅವರು, ಸಿದ್ದರಾಮಯ್ಯ ಅವರು ಸಿಎಂ ಆಗಬೇಕು ಎಂದರೆ ನೀವು ಅವರಿಗೆ ಮತ ಹಾಕಬೇಕು ಎಂದು ಕೋರಿದ್ರು.
ಮುಂಬರುವ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಚಾಮರಾಜಪೇಟೆಯಿಂದ ಸ್ಪರ್ಧಿಸುತ್ತಾರೆ ಎಂಬ ಅನುಮಾನಕ್ಕೆ ಜಮೀರ್ ಅಹ್ಮದ್ ಮಾತು ಇನ್ನಷ್ಟು ಪುಷ್ಟಿ ನೀಡಿದೆ. ಅಲ್ಲದೆ ಸಣ್ಣ ಫೈನಾನ್ಸ್ ಕಂಪನಿಯೊಂದರ ಉದ್ಘಾಟನೆಗೆ ಸಿದ್ದರಾಮಯ್ಯ ಆಗಮಿಸಿರುವುದು ಇನ್ನಷ್ಟು ಕುತೂಹಲ ಮೂಡಿಸಿತು. ಇತ್ತೀಚಿನ ದಿನಗಳಲ್ಲಿ ಚಾಮರಾಜಪೇಟೆಯಲ್ಲಿ ಹಮ್ಮಿಕೊಳ್ಳುವ ಸಾಕಷ್ಟು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದರಿಂದ ಸಿದ್ದರಾಮಯ್ಯ ಮುಂಬರುವ ಚುನಾವಣೆಯಲ್ಲಿ ಬದಾಮಿ ಬಿಟ್ಟು ಇಲ್ಲಿಂದಲೇ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮುಂದಿನ ಸಿಎಂ ವಿಚಾರವಾಗಿ ಯಾವುದೇ ಹೇಳಿಕೆ ನೀಡಬಾರದು ಎಂದು ಪಕ್ಷದ ಹೈಕಮಾಂಡ್ ನಾಯಕರು ಹಾಗೂ ಶಿಸ್ತು ಸಮಿತಿ ಮೇಲಿಂದಮೇಲೆ ಹೇಳುತ್ತಿದ್ದರೂ ಸಿದ್ದರಾಮಯ್ಯ ವಿಚಾರದಲ್ಲಿ ಜಮೀರ್ ನಿಲುವು ಬದಲಾಗುತ್ತಿಲ್ಲ. ಸಿದ್ದರಾಮಯ್ಯರಂಥ ನಾಯಕರ ಬೆಂಬಲ ಇರುವ ಹಿನ್ನೆಲೆ ತಮ್ಮ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ವಿಶ್ವಾಸದಿಂದ ಜಮೀರ್ ಅಹ್ಮದ್ ಇಂತಹ ಮಾತುಗಳನ್ನು ಆಡುತ್ತಿದ್ದಾರೆ ಎನ್ನಲಾಗುತ್ತಿದೆ.
ಅಕ್ರಮ ಗಣಿಗಾರಿಕೆ ವಿಚಾರ ಪ್ರಸ್ತಾಪಿಸುತ್ತೇನೆ:
ಸಮಾರಂಭದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಅಕ್ರಮ ಗಣಿಗಾರಿಕೆ ವಿಚಾರವನ್ನು ಪ್ರಸ್ತಾಪಿಸುತ್ತೇನೆ. ಜುಲೈ ತಿಂಗಳಲ್ಲೇ ಈ ಅಧಿವೇಶನ ನಡೆಯಬೇಕಿತ್ತು. ಆದರೆ ರಾಜ್ಯ ಸರ್ಕಾರ ಅಧಿವೇಶನ ನಡೆಸಿಲ್ಲ, ಹೀಗಾಗಿ ಅಧಿವೇಶನ ನಡೆಸಿ ಎಂದು ಪತ್ರ ಬರೆದಿರುವೆ. ಕನಿಷ್ಠ 60 ದಿನ ಅಧಿವೇಶನ ನಡೆಸಲೇಬೇಕು. ಆದರೆ ಈ ಸರ್ಕಾರ ನಡೆಸಿಲ್ಲ. ಭ್ರಷ್ಟಾಚಾರ, ಕೊರೊನಾ ವೈಫಲ್ಯ ಹಾಗೂ ಅಕ್ರಮ ಗಣಿಗಾರಿಕೆ ಬಗ್ಗೆ ಚರ್ಚೆ ನಡೆಸಬೇಕಿದೆ ಎಂದರು.
ಡಿಕೆಶಿ ನಿವಾಸಕ್ಕೆ ತೆರಳುತ್ತೇನೆ:
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಮ್ಮ ಮನೆಯಲ್ಲಿ ಸಭೆ ಕರೆದಿದ್ದಾರೆ. ಬೆಂಗಳೂರು ಶಾಸಕರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತಿಪಕ್ಷ ನಾಯಕನಾಗಿ ನನ್ನನ್ನು ಆಹ್ವಾನಿಸಿದ್ದು, ನಾನು ಕೂಡ ತೆರಳುತ್ತಿದ್ದೇನೆ ಎಂದರು.
ರಾಕೇಶ್ ಪಾಪಣ್ಣ ಸಿದ್ದರಾಮಯ್ಯ ಆಪ್ತ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಯಾರು ಏನು ಬೇಕಾದರು ಹೇಳಿಕೊಳ್ಳಬಹುದು. ಆದರೆ ಅದೆಲ್ಲ ನಡೆಯಲ್ಲ ಎಂದು ಹೇಳಿದರು.