ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿವಾಸ ಸೋಮವಾರ ಮತ್ತೆ ಚಟುವಟಿಕೆ ಕೇಂದ್ರವಾಗಿ ಮಾರ್ಪಟ್ಟಿದೆ. ಶಾಸಕ ಮಹೇಶ್ ಕುಮಟಳ್ಳಿ, ವಾಲ್ಮೀಕಿ ಪೀಠದ ಬ್ರಹ್ಮಾನಂದ ಸ್ವಾಮೀಜಿ ಭೇಟಿ ಕೊಟ್ಟು ಮಾತುಕತೆ ನಡೆಸಿದ್ದಾರೆ. ಇವರು ಪ್ರತ್ಯೇಕವಾಗಿ ಭೇಟಿ ನೀಡಿ, ರಮೇಶ್ ಪರ ಸ್ವಾಮೀಜಿ ಬ್ಯಾಟ್ ಬೀಸಿರುವುದು ಇನ್ನಷ್ಟು ವಿಶೇಷವಾಗಿದೆ.
ಸಚಿವ ಸ್ಥಾನ ನೀಡಲು ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಒಪ್ಪಿರುವ ಹಿನ್ನೆಲೆ ರಮೇಶ್ ಜಾರಕಿಹೊಳಿ ಅವರ ಮನವೊಲಿಸಲು ಮಹೇಶ್ ಆಗಮಿಸಿದ್ದಾರೆ ಎನ್ನಲಾಗಿದೆ. ಇನ್ನು ಕಾಂಗ್ರೆಸ್ ಶಾಸಕ ಮಹೇಶ್ ಕುಮಟಳ್ಳಿ ಅವರು ರಮೇಶ್ ಆಪ್ತರಲ್ಲಿ ಗುರುತಿಸಿಕೊಂಡಿದ್ದಾರೆ.
ರಮೇಶ್ ಡಿಸಿಎಂ ಆಗಲಿ ಎಂದ ಸ್ವಾಮಿಜಿ
ರಮೇಶ ಜಾರಕಿಹೊಳಿಯನ್ನು ಭೇಟಿ ಮಾಡಿದ ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳಾದ ವಾಲ್ಮೀಕಿ ಪೀಠದ ಬ್ರಹ್ಮಾನಂದ ಸ್ವಾಮೀಜಿಗಳು, ಮೈತ್ರಿ ಸರ್ಕಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗಿದೆ. ಕೇವಲ ಒಬ್ಬರಿಗೆ ಮಾತ್ರ ಮಂತ್ರಿ ಸ್ಥಾನ ನೀಡಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ನಮ್ಮ ಸಮುದಾಯಕ್ಕೆ ನಾಲ್ಕು ಸ್ಥಾನ ನೀಡಿದ್ರು. ಈಗ ಮೈತ್ರಿ ಸರ್ಕಾರದಲ್ಲಿ ರಮೇಶ ಜಾರಕಿಹೊಳಿಗೆ ಡಿಸಿಎಂ ಹುದ್ದೆ ನೀಡಬೇಕು. ನಮ್ಮ ಸಮುದಾಯದ ಅನ್ಯಾಯ ದೂರ ಮಾಡಬೇಕು ಎಂದು ಆಗ್ರಹಿಸಿದರು.