ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಕಿಂಗ್ ಪಿನ್ ದಿವ್ಯಾ ಹಾಗರಗಿ ಹಿಂದೆ, ನಮ್ಮ ಪಕ್ಷದಲ್ಲಿ ಜವಾಬ್ದಾರಿ ಸ್ಥಾನದಲ್ಲಿ ಇದ್ದರು. ಆದರೆ ಈಗ ಅವರಿಗೆ ಜವಾಬ್ದಾರಿ ಇಲ್ಲ. ನಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವ ಕೂಡ ಇಲ್ಲ. ಅವರನ್ನು ಆದಷ್ಟು ಶೀಘ್ರವಾಗಿ ಬಂಧನ ಮಾಡಬೇಕು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ. ಮಹೇಶ್ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಿಎಸ್‍ಐ ಹಗರಣದ ತನಿಖೆ ನಡೆಯುತ್ತಿದೆ. ನಾವೇನೂ ಅದನ್ನು ಮುಚ್ಚಿಟ್ಟಿಲ್ಲ. ದಿವ್ಯಾ ಹಾಗರಗಿ ಬಂಧನಕ್ಕೆ 8 ತಂಡಗಳು ಶ್ರಮಿಸುತ್ತಿವೆ. ಬಿಜೆಪಿಗೂ ದಿವ್ಯಾ ಹಾಗರಗಿಗೂ ಈಗ ಸಂಬಂಧವಿಲ್ಲ. ಪೊಲೀಸರು ಅವರನ್ನು ಬಂಧಿಸಲಿದ್ದಾರೆ. ಬಿಜೆಪಿ ಎಂದಿಗೂ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುವುದಿಲ್ಲ. ಹಿಂದೆ ಸಿದ್ದರಾಮಯ್ಯ ಕಾಲದಲ್ಲಿ ಸಿದ್ದು ಆಪ್ತ ಮರಿಗೌಡ ಐಎಎಸ್ ಅಧಿಕಾರಿ ಶಿಖಾ ಮೇಲೆ ಹಲ್ಲೆ ಮಾಡಿದ್ದರು. ಆಗ ಮರಿಗೌಡನ ಬಂಧಿಸೋಕೆ ಎರಡು ತಿಂಗಳು ಸಮಯ ತಗೊಂಡಿದ್ದರು ಎಂದು ಬಂಧನ ವಿಳಂಬವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.
ಕರ್ನಾಟಕದಲ್ಲಿ ಲೋಕಾಯುಕ್ತ ದುರ್ಬಲ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ವೇಳೆಯಲ್ಲಿಯೇ ಭ್ರಷ್ಟಾಚಾರ ತಾಂಡವ ನೃತ್ಯವಾಡಿತ್ತು. ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿಯಲ್ಲಿ ಕರ್ನಾಟಕದಲ್ಲಿ ಲೋಕಾಯುಕ್ತವನ್ನು ದುರ್ಬಲಗೊಳಿಸಿದ್ದರು. ಭ್ರಷ್ಟಾಚಾರ ಹಗರಣದಲ್ಲಿ ಸಿಲುಕಿದ್ದರು. ಅತ್ಯಂತ ಪ್ರಬಲ ಲೋಕಾಯುಕ್ತ ವ್ಯವಸ್ಥೆ ಇದ್ದ ರಾಜ್ಯದಲ್ಲಿ ಅದನ್ನು ದುರ್ಬಲಗೊಳಿಸಿ ಎಸಿಬಿ (ಆ್ಯಂಟಿ ಕರಪ್ಶನ್ ಬ್ಯೂರೊ) ರಚಿಸಿ 5 ವರ್ಷಗಳ ಕಾಲ ಭ್ರಷ್ಟಾಚಾರದ ತಾಂಡವ ನೃತ್ಯಕ್ಕೆ ಕಾರಣಕರ್ತರಾಗಿದ್ದರು ಎಂದು ಆರೋಪಿಸಿದರು.
ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ: ದಿವ್ಯಾ ಹಾಗರಗಿ ಸೇರಿ 6 ಆರೋಪಿಗಳಿಗೆ ಅರೆಸ್ಟ್ ವಾರೆಂಟ್ ಜಾರಿ
ಪ್ರವಾಹ, ಕೋವಿಡ್‍ನಂಥ ಸಮಸ್ಯೆಯನ್ನು ರಾಜ್ಯದ ಬಿಜೆಪಿ ಆಡಳಿತದಲ್ಲಿ ಎದುರಿಸಬೇಕಾಗಿತ್ತು. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಲೋಕಾಯುಕ್ತವನ್ನು ಬಲಪಡಿಸಲಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಸಿದ್ದರಾಮಯ್ಯ ಅವರ ಆಡಳಿತದ ಅವಧಿಯ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಸುಮಾರು 1 ಲಕ್ಷ ಪುಟಗಳ ದೂರುಗಳನ್ನು ಬಿಜೆಪಿ ಆಗ ಎಸಿಬಿಗೆ ಸಲ್ಲಿಸಿತ್ತು.
ಕಾಂಗ್ರೆಸ್ ಭ್ರಷ್ಟಾಚಾರದ ಪಿತಾಮಹ: ಭ್ರಷ್ಟರ ಗಂಗೋತ್ರಿ ಕಾಂಗ್ರೆಸ್ ಎಂದು ಟೀಕಿಸಿದರು. ಮೈಸೂರಿನಲ್ಲಿ ಸಿದ್ದರಾಮಯ್ಯನವರು ತಮ್ಮದೇ ಅಧ್ಯಕ್ಷತೆಯ ಗಾಂಧಿಪಥ ಟ್ರಸ್ಟ್ ಅನ್ನು ಮೂರೇ ದಿನದಲ್ಲಿ ರಚಿಸಿ 2 ಎಕರೆ ಜಾಗ ಕಬಳಿಸಲು ಯತ್ನಿಸಿದ್ದರು. ಆದರೆ ಅಧಿಕಾರಿಯೊಬ್ಬರ ಸಮಯಪ್ರಜ್ಞೆಯಿಂದ ಇದು ಸಾಧ್ಯವಾಗಲಿಲ್ಲ ಎಂದು ವಿವರಿಸಿದರು.