ಬೆಂಗಳೂರು: ಚೊಚ್ಚಲ ಆವೃತ್ತಿಯ ಯಶಸ್ಸಿನ ಬಳಿಕ ಬಹುನಿರೀಕ್ಷಿತ ದ್ವಿತೀಯ ಆವೃತ್ತಿಯ ಶ್ರೀರಾಮ್ ಕ್ಯಾಪಿಟಲ್ ಮಹಾರಾಜ ಟ್ರೋಫಿ ಟೂರ್ನಿಗೆ ತಯಾರಿ ಆರಂಭವಾಗಿದೆ. ಆಗಸ್ಟ್ 13ರಿಂದ 29ರವರೆಗೂ ಟೂರ್ನಿಗೆ ದಿನಾಂಕ ನಿಗದಿಯಾಗಿದ್ದು, ನಾಳೆ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಹರಾಜು ಪ್ರಕ್ರಿಯೆ: ಆಟಗಾರರ ಹರಾಜು ಪ್ರಕ್ರಿಯೆಗೆ ನಾಲ್ಕು ಕೆಟಗರಿಗಳನ್ನು ನಿಗದಿಸಲಾಗಿದ್ದು, ಪ್ರತಿ ಫ್ರಾಂಚೈಸಿಗೆ ತನ್ನ ಆಟಗಾರರನ್ನು ಖರೀದಿಸಲು 50 ಲಕ್ಷ ರೂ ಗರಿಷ್ಠ ಮಿತಿ ನೀಡಲಾಗಿದೆ. 'ಎ' ಕೆಟಗರಿಯಲ್ಲಿ ಭಾರತ ರಾಷ್ಟ್ರೀಯ ತಂಡ ಹಾಗೂ ಐಪಿಎಲ್ ತಂಡಗಳನ್ನು ಪ್ರತಿನಿಧಿಸಿರುವ ಆಟಗಾರರ ಹರಾಜು ನಡೆಯಲಿದ್ದು, 'ಬಿ' ಕೆಟಗರಿಯಲ್ಲಿ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಂತಹ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡಿರುವ ಹಿರಿಯ ಆಟಗಾರರ ಹರಾಜು ನಡೆಯಲಿದೆ. ಇನ್ನು 'ಸಿ' ಕೆಟಗರಿಯಲ್ಲಿ ಬಿಸಿಸಿಐ ಅನುಮೋದಿತ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿರುವ ಆಟಗಾರರ ಹರಾಜು ನಡೆದರೆ, 'ಡಿ' ಕೆಟಗರಿಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ.ಎಸ್.ಸಿ.ಎ)ಯಲ್ಲಿ ನೋಂದಾಯಿತ ಆಟಗಾರರ ಹರಾಜು ನಡೆಯಲಿದೆ.
ಪ್ರತಿ ಫ್ರಾಂಚೈಸಿಯು ಕನಿಷ್ಠ 16 ಆಟಗಾರರನ್ನು ಹೊಂದಿರಬೇಕು. ಮತ್ತು ಆಯಾ ವಲಯದ ಇಬ್ಬರು ಕ್ಯಾಚ್‌ಮೆಂಟ್ ಏರಿಯಾ ಆಟಗಾರರ ಜೊತೆಗೆ 18ಕ್ಕಿಂತ ಹೆಚ್ಚು ಆಟಗಾರರನ್ನು ಹೊಂದಿರಬಾರದು ಎಂಬ ನಿಯಮವಿರಲಿದೆ.
ಹರಾಜಿನಲ್ಲಿರುವ ಸ್ಟಾರ್ ಆಟಗಾರರು ಯಾರು?: ಮಯಂಕ್ ಅಗರ್ವಾಲ್, ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಅಭಿಮನ್ಯು ಮಿಥುನ್, ಅಭಿನವ್ ಮನೋಹರ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಜೆ.ಸುಚಿತ್, ವಿಜಯ್ ಕುಮಾರ್ ವೈಶಾಕ್, ರೋನಿತ್ ಮೋರೆ, ಪ್ರವೀಣ್ ದುಬೆ, ಕೆ.ಸಿ ಕರಿಯಪ್ಪ, ಕೆ.ಪಿ.ಅಪ್ಪಣ್ಣರಂಥಹ ಸ್ಟಾರ್ ಆಟಗಾರರು ಹರಾಜಿನಲ್ಲಿರಲಿದ್ದಾರೆ.
ಆಟಗಾರರ ಹರಾಜು ಪ್ರಕ್ರಿಯೆಯ ಕುರಿತು ಪ್ರತಿಕ್ರಿಯಿಸಿದ ಮಹಾರಾಜ ಟ್ರೋಫಿ ಆಯುಕ್ತ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಉಪಾಧ್ಯಕ್ಷ ಬಿ.ಕೆ.ಸಂಪತ್ ಕುಮಾರ್ "ಕಳೆದ ಆವೃತ್ತಿಯು ಅದ್ಭುತ ಯಶಸ್ಸು ಸಾಧಿಸಿದ್ದು, ಅನೇಕ ಯುವ ಪ್ರತಿಭೆಗಳು ಅದರ ಉಪಯೋಗ ಪಡೆದುಕೊಂಡಿದ್ದಾರೆ. ಕರ್ನಾಟಕದಿಂದ ಮತ್ತಷ್ಟು ಯುವ ಆಟಗಾರರನ್ನ ಹೊರತರಬೇಕು ಎಂಬುದು ಟೂರ್ನಿಯ ಮುಖ್ಯ ಉದ್ದೇಶ. ಈ ಬಾರಿ ಮತ್ತಷ್ಟು ವೃತ್ತಿಪರವಾಗಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು ಸುಮಾರು 700 ಆಟಗಾರರು ಹರಾಜಿನಲ್ಲಿರಲಿದ್ದಾರೆ" ಎಂದರು.
ಶನಿವಾರ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ತಮ್ಮ ನೆಚ್ಚಿನ ತಂಡಗಳ ಬಗ್ಗೆ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳ ಕಾತುರ ಹೆಚ್ಚಿಸಿದೆ. ಕಳೆದ ಬಾರಿಯಂತೆ ಟೂರ್ನಿಯ ಮೊದಲಾರ್ಧ ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ಆದರೆ ಈ ಬಾರಿಯ ಟೂರ್ನಿ ಬೆಂಗಳೂರಿಗೆ ಸೀಮಿತವಾಗಿರಲಿದ್ದು ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದೆ.
ಇದನ್ನೂ ಓದಿ: ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಬಾಲಿವುಡ್ ನಟ ಸಂಜಯ್ ದತ್- ವಿಡಿಯೋ