ಬೆಂಗಳೂರು: ಮಹದಾಯಿ ಯೋಜನೆ ಜಾರಿಗೊಳಿಸಲು ನಾವು ಬದ್ಧ. ಆದರೆ ಇಂಥದ್ದೇ ದಿನಾಂಕ ಅಂತ ನಿರ್ಧರಿಸಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಇದು ಅಂತರರಾಜ್ಯ ನೀರಿನ ವಿವಾದ. 1,600 ಕೋಟಿ ರೂ. ಮೊತ್ತದ ಯೋಜನಾ ವಿವರ ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಅಲ್ಲಿಂದ ಮಾಹಿತಿ ಬಂದಾಗ ಉತ್ತರಿಸುತ್ತೇವೆ ಎಂದು ನೀರಾವರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಅವರ ಮಹದಾಯಿ ಯೋಜನೆ ಬಗ್ಗೆ ಗಮನ ಸೆಳೆದ ಪ್ರಶ್ನೆಗೆ ಉತ್ತರಿಸಿ, ಅತ್ಯಂತ ಸಂಕ್ಷಿಪ್ತವಾಗಿ ಉತ್ತರ ನೀಡುತ್ತೇನೆ. ನಿಮ್ಮ ಸರ್ಕಾರ ಇದ್ದಾಗ ಹೋರಾಟಗಾರರನ್ನು ಓಡಿಸಿತ್ತು. ನಮ್ಮ ಬದ್ಧತೆಯಿಂದ ಮೇಕೆದಾಟಿಗೆ ಹಣ ನೀಡಿದ್ದೇವೆ. ಪಾದಯಾತ್ರೆಗೆ ಹೆದರಿ ಹಣ ನೀಡಿಲ್ಲ. ಸ್ವಾತಂತ್ರ್ಯ ಬಂದ ನಂತರ ಯೋಜನೆಗಳಿಗೆ ಐದು ಸಾವಿರ ಕೋಟಿ ರೂಪಾಯಿ ಯಾರೂ ಮೀಸಲಿಟ್ಟಿರಲಿಲ್ಲ. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಮಾಡಿ ಕೂಡಲ ಸಂಗಮ ಮುಂದೆ ಆಣೆ ಮಾಡಿದ್ದೀರಿ. ಆದರೆ ಮಾತು ಉಳಿಸಿಕೊಂಡಿಲ್ಲ ಎಂದು ಟೀಕಿಸಿದರು.
19,600 ಕೋಟಿ ರೂ ನೀರಾವರಿಗೆ ಮೀಸಲು: ಮಹದಾಯಿ ವಿಚಾರವಾಗಿ ದಿನ ಹೇಳಲ್ಲ. ಆದರೆ ಯೋಜನೆ ಮಾಡಿಯೇ ತೀರುತ್ತೇವೆ. ಇದು ಮಾತ್ರವಲ್ಲ, ಉಳಿದೆಲ್ಲಾ ನೀರಾವರಿ ಯೋಜನೆಯನ್ನೂ ಮಾಡಲು ಬದ್ಧ. 19,600 ಕೋಟಿ ರೂ. ಮೊತ್ತವನ್ನು ನೀರಾವರಿಗೆ ಮೀಸಲಿಟ್ಟಿದ್ದೇವೆ. ಹಿಂದಿನ ಸರ್ಕಾರಕ್ಕೆ ಬದ್ಧತೆ ಇದ್ದರೆ ಇಷ್ಟರಲ್ಲಿ ಯೋಜನೆ ಜಾರಿಗೆ ಬಂದಿರುತ್ತಿತ್ತು. ನಾವು ಮಾಡಲು ಇಚ್ಛಿಸುತ್ತೇವೆ ಎಂದು ಹೇಳಿದರು.
ಸಲೀಂ ಅಹಮದ್ ಮಾತನಾಡಿ, ಮಹದಾಯಿ ವಿಚಾರವಾಗಿ ನಿರ್ಧಾರ ಕೈಗೊಳ್ಳುವ ರಾಜಕೀಯ ಇಚ್ಚಾಶಕ್ತಿ ಸರ್ಕಾರಕ್ಕೆ ಇಲ್ಲ. ಡಬಲ್ ಎಂಜಿನ್ ಸರ್ಕಾರ ಇದೆ, ಆದಷ್ಟು ಬೇಗ ಯೋಜನೆ ಮಾಡಬೇಕು. ನಮ್ಮ ಹೋರಾಟಕ್ಕೆ ಬೆಲೆ ಕೊಟ್ಟು ಸರ್ಕಾರ ಸಾವಿರ ಕೋಟಿ ಹಣ ಮೀಸಲಿಟ್ಟಿದೆ. ಕೇಂದ್ರ, ರಾಜ್ಯ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರ ಇದೆ. ಯಾವಾಗ ಈ ಯೋಜನೆ ಆರಂಭಿಸುತ್ತೀರಿ ಎಂದು ತಿಳಿಸಿ. ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಯೋಜನೆ ಜಾರಿಗೆ ತಂದಿಲ್ಲ ಎಂದರು.
ಇದನ್ನೂ ಓದಿ: ಕೃಷಿ ಹೊಂಡ ನಿರ್ಮಾಣದ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುವುದು : ಸಿಎಂ ಭರವಸೆ