ಬೆಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಹಾಗೂ ಭಕ್ತ ಚರಣದಾಸ್ ಬೆಂಗಳೂರಿಗೆ ಆಗಮಿಸಿದ್ದು, ಕೆಪಿಸಿಸಿ ನೂತನ ಅಧ್ಯಕ್ಷರ ನೇಮಕ ಹಾಗೂ ವಿವಿಧ ನೇಮಕಗಳ ಕುರಿತಾಗಿ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಪ್ರತ್ಯೇಕ ಚರ್ಚೆ ನಡೆಸುತ್ತಿದ್ದಾರೆ. ಕುಮಾರಕೃಪಾ ಅತಿಥಿಗೃಹದಲ್ಲಿ ಉಭಯ ನಾಯಕರು 50ಕ್ಕೂ ಹೆಚ್ಚು ನಾಯಕರ ಜೊತೆ ಸಮಾಲೋಚನೆ ನಡೆಸುತ್ತಿದ್ದಾರೆ.
ಈಗಾಗಲೇ ಕಾಂಗ್ರೆಸ್ ಹಿರಿಯ ನಾಯಕ ಎಂ. ವೀರಪ್ಪ ಮೊಯಿಲಿ ಹಾಗೂ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ಸೇರಿದಂತೆ ಮತ್ತಿತರ ನಾಯಕರು ಸಮಾಲೋಚಿಸಿ ತೆರಳಿದ್ದು, ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ಎಚ್.ಕೆ. ಪಾಟೀಲ್, ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ನಾಯಕರು ಆಗಮಿಸುತ್ತಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯ ಸಂಗ್ರಹಿಸಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ತಿಳಿಸಲಿದ್ದಾರೆ. ಪಕ್ಷ ಬಲಪಡಿಸುವುದಕ್ಕೆ ಸಲಹೆ ಹಾಗೂ ಯಾವ ಹಿರಿಯ ನಾಯಕರ ಮಧ್ಯೆ ಅಸಮಾಧಾನವಿದೆ ಎಂಬೆಲ್ಲಾ ವಿಚಾರವಾಗಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಎಂ. ವೀರಪ್ಪ ಮೊಯಿಲಿ, ಪೌರತ್ವ ಕಾಯ್ದೆಯ ವಿರುದ್ಧ ಇಡೀ ದೇಶವೇ ದಂಗೆ ಎದ್ದಿದೆ. ಆದರೆ ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ಅಂತ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುತ್ತಿದ್ದಾರೆ ಎಂದರು. ರಾಜ್ಯದಲ್ಲಿ ಐಪಿಸಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇದು ತುಘಲಕ್ ಕಾನೂನಿನ ವೈಖರಿ ಎಂದು ಟೀಕಿಸಿದ್ರು.