ಬೆಂಗಳೂರು: ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಪದಗ್ರಹಣ ಮಾಡುವ ಮುನ್ನ ಮಧು ಬಂಗಾರಪ್ಪ ತಮ್ಮ ತಂದೆ ಎಸ್ ಬಂಗಾರಪ್ಪ ಅವರಿಗೆ ನಮನ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದ್ದು ನೂತನ ಸಚಿವರಾಗಿ ಪದಗ್ರಹಣ ಮಾಡಲಿರುವ ಮಧು ಬಂಗಾರಪ್ಪ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಮತ್ತು ತಾಯಿಯ ಫೋಟೋಗೆ ಪೂಜೆ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದಿಂದ ಮೊದಲ ಬಾರಿಗೆ ಹಾಗೂ ಸೊರಬದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಮಧು ಬಂಗಾರಪ್ಪ ಯಾವುದೇ ಶುಭಕಾರ್ಯ ಮಾಡುವ ಮುನ್ನ ತಂದೆ-ತಾಯಿಯರ ಆಶೀರ್ವಾದ ಪಡೆಯುವುದು ವಾಡಿಕೆ. ದೈಹಿಕವಾಗಿ ಇಲ್ಲದಿದ್ದರೂ ಭೌತಿಕವಾಗಿ ತಂದೆ ಎಸ್ ಬಂಗಾರಪ್ಪ ತಮ್ಮೊಂದಿಗೆ ಸದಾ ಇದ್ದಾರೆ ಎನ್ನುತ್ತಾರೆ ಮಧು.
ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ: 8 ಶಾಸಕರಿಗೆ ಮೊದಲ ಬಾರಿ ಒಲಿದ ಸಚಿವ ಸ್ಥಾನ
ಪ್ರಮಾಣ ವಚನಕ್ಕೆ ತೆರಳುವ ಮುನ್ನ ನಿವಾಸದಲ್ಲಿ ತಂದೆ-ತಾಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸದಾಶಿವ ನಗರದ ಬಳಿ ಅಭಿಮಾನಿಗಳು ಕಾರ್ಯಕರ್ತರ ಸಂಭ್ರಮ ಮನೆ ಮಾಡಿತ್ತು. ಬೆಂಬಲಿಗರು ಹಾಗೂ ಕಾರ್ಯಕರ್ತರ ಆಗಮಿಸಿ ಶುಭಾಶಯ ಕೋರಿ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಿದರು.
ಸೋದರ ಹಾಗೂ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ವಿರುದ್ಧ ಗೆಲ್ಲಿಸಿ ಕಳುಹಿಸಿರುವ ಮತದಾರರಿಗೂ ಅವರು ಇದೇ ವೇಳೆ ಶುಭಾಶಯ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿದ್ದು ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ಬೆಂಗಳೂರಿನ ಸದಾಶಿವ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಧು, ಮತ ನೀಡಿದ ಹಾಗೂ ನೀಡದ ಎಲ್ಲಾ ಸೊರಬ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಯಾವುದೇ ಹುದ್ದೆ ನಿಭಾಯಿಸಲು ಸಿದ್ಧ: ಮುಂಬರಲಿರುವ ಲೋಕಸಭಾ ಚುನಾವಣೆಗೆ ಪಕ್ಷದಿಂದ ಸಿದ್ಧತೆಗಳು ಸಹ ನಡೆಯುತ್ತಿವೆ. ಸಚಿವ ಸ್ಥಾನ ಸಿಗುತ್ತದೆ ಎಂದು ನನಗೆ ವಿಶ್ವಾಸವಿತ್ತು. ವರಿಷ್ಠರು ಈಗ ಜವಾಬ್ದಾರಿ ನೀಡಿದ್ದಾರೆ. ಶಾಸಕರೆಲ್ಲರಿಗೂ ಸಚಿವರಾಗುವ ಅರ್ಹತೆ ಇರುತ್ತದೆ. ವರಿಷ್ಠರು ಅಳೆದುತೂಗಿ ಸಚಿವ ಸ್ಥಾನ ನೀಡಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತೇನೆ. ಸೊರಬ ಜನತೆಗೆ ಕಷ್ಟವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವವರು: ಸಚಿವರಾಗಿ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ, ಶಾಸಕ ಲಕ್ಷ್ಮಿ ಹೆಬ್ಬಾಳ್ಕರ್, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್, ಶಾಸಕ ಎಸ್ ಎಸ್ ಮಲ್ಲಿಕಾರ್ಜುನ್, ಶಾಸಕ ಶರಣಪ್ರಕಾಶ್ ಪಾಟೀಲ್, ಶಾಸಕ ವೆಂಕಟೇಶ್, ಶಾಸಕ ಕೃಷ್ಣ ಬೈರೇಗೌಡ, ಶಾಸಕ ಎಂಸಿ ಸುಧಾಕರ್, ಚೆಲುವರಾಯಸ್ವಾಮಿ, ಶಾಸಕ ಡಾ ಹೆಚ್ ಸಿ ಮಹದೇವಪ್ಪ, ಶಾಸಕ ಆರ್ ಬಿ ತಿಮ್ಮಾಪುರ್, ಶಾಸಕ ರುದ್ರಪ್ಪ ಲಮಾಣಿ, ಶಾಸಕ ರಹೀಮ್ ಖಾನ್, ಗದಗ ಶಾಸಕ ಹೆಚ್ ಕೆ ಪಾಟೀಲ್, ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿ ಬೋಸ್ ರಾಜ್, ಭಟ್ಕಳ ಶಾಸಕ ಮಂಕಾಳು ವೈದ್ಯ, ಶಾಸಕ ಶಿವರಾಜ್ ತಂಗಡಗಿ, ಶಾಸಕ ಸಂತೋಷ್ ಲಾಡ್, ಸೊರಬ ಶಾಸಕ ಮಧು ಬಂಗಾರಪ್ಪ, ಶಾಸಕ ಕೆ ಎನ್ ರಾಜಣ್ಣ ಹಾಗೂ ಶಾಸಕ ಬಿ ನಾಗೇಂದ್ರ, ಶರಣಬಸಪ್ಪ ದರ್ಶನಾಪುರ್, ಭೈರತಿ ಸುರೇಶ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ಇದನ್ನೂ ಓದಿ: ಮಾಜಿ ಶಾಸಕ ಬೋಸರಾಜುಗೆ ಒಲಿದ ಸಚಿವ ಸ್ಥಾನ