ಬೆಂಗಳೂರು : ಮದ್ದೂರಿನ ಪ್ರಮುಖ ಉದ್ಯಮಿ ಉದಯ್ ಗೌಡ ಅವರು ಇಂದು ಕಾಂಗ್ರೆಸ್ಗೆ ಸೇರ್ಪಡೆ ಆದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷದ ಶಾಲು ಹೊದೆಸಿ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಸೇರ್ಪಡೆಯಾದ ಉದಯ ಗೌಡ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ವಾಣಿಜ್ಯೋದ್ಯಮಿಯಾಗಿ ಮದ್ದೂರು ಭಾಗದಲ್ಲಿ ಅತ್ಯಂತ ಜನಪ್ರಿಯರಾಗಿರುವ ಉದಯ್ ಗೌಡ ಈ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಶಾಸಕ ಡಿಸಿ ತಮ್ಮಣ್ಣಗೆ ತೀವ್ರ ಪೈಪೋಟಿ ನೀಡಲಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮದ್ದೂರಿನಲ್ಲಿ ಗೆಲ್ಲುವ ಅವಕಾಶ ಇದ್ದು ಉದಯ್ ಗೌಡ ಸೇರ್ಪಡೆಯಿಂದಾಗಿ ಕಾಂಗ್ರೆಸ್ಗೆ ಹೆಚ್ಚಿನ ಬಲ ಬಂದಂತೆ ಆಗಿದೆ. ಕಾಂಗ್ರೆಸ್ ಪಕ್ಷದ ಸಾಕಷ್ಟು ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದ ಮದ್ದೂರು ಕ್ಷೇತ್ರ 2008ರ ನಂತರ ಜೆಡಿಎಸ್ ವಶದಲ್ಲಿದೆ.
2008ರಲ್ಲಿ ಎಂಎಸ್ ಸಿದ್ದರಾಜು ಜೆಡಿಎಸ್ನಿಂದ ಗೆದ್ದು ಅನಾರೋಗ್ಯದಿಂದಾಗಿ ಆರು ತಿಂಗಳಲ್ಲಿ ಮೃತಪಟ್ಟಿದ್ದರು. ಬಳಿಕ ಇವರ ಸಾವಿನಿಂದ ತೆರವಾದ ಕ್ಷೇತ್ರಕ್ಕೆ ಅವರ ಪತ್ನಿ ಕಲ್ಪನಾ ಸ್ಪರ್ಧಿಸಿ ಗೆಲುವು ಸಾಧಿಸಿ ಅವಧಿ ಪೂರ್ಣಗೊಳಿಸಿದ್ದರು. 2004ರಲ್ಲಿ ಕಾಂಗ್ರೆಸ್ನಿಂದ ಗೆದ್ದು ಶಾಸಕರಾಗಿದ್ದ ಡಿಸಿ ತಮ್ಮಣ್ಣ 2013ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. 2018ರಲ್ಲಿಯೂ ತಮ್ಮಣ್ಣ ಅವರೇ ಗೆಲುವು ಸಾಧಿಸಿದ್ದು, ಈ 2023ರ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಸವಾಲು ಒಡ್ಡಲು ಉದಯ್ ಗೌಡ ಕಾಂಗ್ರೆಸ್ ಸೇರ್ಪಡೆಯಾಗಿ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾಹಿತಿ ಇದೆ.
ಉದಯಗೌಡ ಬೆಂಬಲಿಗರ ಸಂಭ್ರಮಾಚರಣೆ : ಮದ್ದೂರಿನಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಉದಯ್ಗೌಡ ಬೆಂಬಲಿಗರು ಡೊಳ್ಳು ಕುಣಿತ ಹಾಗೂ ವಿಶೇಷ ಮೆರವಣಿಗೆ ಕೈಗೊಂಡರು. ಕಾಂಗ್ರೆಸ್ ಪಕ್ಷದ ಬಾವುಟ ಹಾಗೂ ಉದಯ್ ಗೌಡರ ಭಾವಚಿತ್ರ ಒಳಗೊಂಡ ಚಿತ್ರವನ್ನು ಪ್ರದರ್ಶಿಸಿದ ಕಾರ್ಯಕರ್ತರು ಕೆಪಿಸಿಸಿ ಕಚೇರಿ ಮುಂಭಾಗ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
ಬಳಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಹುಟ್ಟು ಸಾವು ಸಹಜ. ಆದರೆ, ಸಮಾಜ ಮುಂದುವರಿಯುತ್ತಾ ಇರಬೇಕು. ನಮ್ಮ ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ ನಿಧನದಿಂದ ಆಘಾತ ಉಂಟಾಗಿತ್ತು. ಪ್ರಜಾಧ್ವನಿಯಾತ್ರೆ ಕೂಡ ನಿಂತಿತ್ತು. ಇಂದಿನಿಂದ ಮತ್ತೆ ಆರಂಭವಾಗಿದೆ. ಇಂದು ಉದಯ್ ಗೌಡ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿದ್ದಾರೆ. ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಮದ್ದೂರು ಮುಖ್ಯ ಕ್ಷೇತ್ರ ಎಂದು ಹೇಳಿದರು.
ಮದ್ಧೂರು ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧೆ ಸಾಧ್ಯತೆ : ಮದ್ದೂರಿನಲ್ಲಿ ಜನತಾದಳವನ್ನು ಸೋಲಿಸಬೇಕೆಂಬ ಧ್ಯೇಯ ಅವರಿಗೆ ಇದೆ. ಉದಯ್ ಗೌಡ ಜೊತೆ ಐದಾರು ಸುತ್ತಿನ ಮಾತುಕತೆ ನಡೆಸಿದ್ದೇವೆ. ನಮ್ಮಿಬ್ಬರ ಧ್ಯೇಯ ಜೆಡಿಎಸ್ ಅನ್ನು ಸೋಲಿಸುವುದು. ಪ್ರಧಾನಿ ನರೇಂದ್ರ ಮೋದಿ ಸಹ ಕೇವಲ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿ ಮಾತಿನ ದಾಳಿ ನಡೆಸಿದ್ದಾರೆಯೇ ಹೊರತು ಜೆಡಿಎಸ್ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಅಲ್ಲಿಗೆ ಕಾಂಗ್ರೆಸ್ ಮಾತ್ರ ಪ್ರಬಲವಾಗಿದೆ ಎಂಬುದು ದೃಢವಾಗಿದೆ ಎಂದರು.
ಯಾರೇ ಕಾಂಗ್ರೆಸ್ ಪಕ್ಷ ಸೇರುವಾಗ ನಾವು ಯಾವುದೇ ನಿಬಂಧನೆಗಳನ್ನು ಹಾಕುವುದಿಲ್ಲ. ಸೇರ್ಪಡೆಯಾಗವವರು ಪಕ್ಷದ ಕಾರ್ಯಕರ್ತರಾಗಿ ದುಡಿಯಬೇಕೇ ಹೊರತು ಟಿಕೆಟ್ ಆಕಾಂಕ್ಷಿಯಾಗಿ ಬಂದು ಸೇರುವುದಲ್ಲ. ಯಾರು ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೋ ಅವರಿಗೆ ನಾವು ಟಿಕೆಟ್ ನೀಡುತ್ತೇವೆ. ಸಾಕಷ್ಟು ಮಂದಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದಾರೆ. ಅವರವರ ವೈಯಕ್ತಿಕ ಅಭಿಪ್ರಾಯಕ್ಕೆ ಬೆಂಬಲ ನೀಡಬೇಕು. ನಾನು ಮತ್ತು ಕುಮಾರಸ್ವಾಮಿ ಸಾಕಷ್ಟು ಕಿತ್ತಾಡಿದ್ದೇವೆ. ಆದರೆ ಹೈಕಮಾಂಡ್ ಮಾತಿಗೆ ಒಪ್ಪಿ ಒಟ್ಟಾಗಿಲ್ಲವೇ ? ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಮ್ ಎಂದು ನಾನು ಹೇಳುವುದಿಲ್ಲ. ಯಾವುದೇ ವಿಚಾರವಿದ್ದರೂ ಅದು ಅವರ ಭಾವನೆಗೆ ಬಿಟ್ಟದ್ದು ಎಂದರು.
ಪುಟ್ಟಣ್ಣ ಪಕ್ಷಕ್ಕೆ ಸೇರ್ಪಡೆ ಆಗುವುದಾಗಿ ಬಂದಿದ್ದರು. ಆದರೆ, ಇದುವರೆಗೂ ಸೇರ್ಪಡೆ ಸಂಬಂಧ ಸಂಪರ್ಕ ಮಾಡಿಲ್ಲ. ಕಾಂಗ್ರೆಸ್ ಕಚೇರಿ ದೇವಸ್ಥಾನ ಇದ್ದಂತೆ ಇಲ್ಲಿ ಯಾರು ಬೇಕಾದರೂ ಬರಬಹುದು ಹೋಗಬಹುದು. ಯಾರಿಗೂ ತೀವ್ರ ಒತ್ತಾಯ ಮಾಡುವುದಿಲ್ಲ ಎಂದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಗೂಳಿಗೌಡ, ಮಧು ಮಾದೇಗೌಡ, ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಜಂಟಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರ ಜೊತೆ ಪುಟ್ಟಣ್ಣ! ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆ