ಬೆಂಗಳೂರು: ಪಾನಿಪುರಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ನೆನೆಸಿಕೊಂಡ ತಕ್ಷಣ ತಿನ್ನಬೇಕಿನಿಸುವ ರುಚಿಕರ ಆಹಾರ. ಈ ಕಾರಣಕ್ಕಾಗೆ ರಸ್ತೆ ಬದಿಯ ಹಲವು ಕಡೆ ಈ ಅಂಗಡಿಗಳು ತಲೆ ಎತ್ತಿವೆ. ಆದರೆ, ಇಲ್ಲೊಂದು ಅಂಗಡಿಯಲ್ಲಿ ಪಾನಿಪುರಿ ಫುಲ್ ಸ್ಫೆಷಲ್. ರುಚಿ ಮಾತ್ರವಲ್ಲ ಮಾಡುವ ಶೈಲಿ ಕೂಡ.
ಹೌದು..., ಕಾಲ ಬದಲಾಗಿದೆ. ಟ್ರೆಂಡ್ ಕೂಡ ಅದಕ್ಕೆ ತಕ್ಕಂತೆ ಬದಲಾಗುತ್ತಿದೆ. ಅಷ್ಟೇ ಅಲ್ಲ, ತಂತ್ರಜ್ಞಾನ ಕೂಡ ಮುಂದುವರೆದಂತೆ ಹೊಸ ಹೊಸ ಆವಿಷ್ಕಾರ ಜನರನ್ನು ಹತ್ತಿರ ಮಾಡುತ್ತಿದೆ. ಅದರಲ್ಲೂ ದಿನೇ ದಿನೇ ಹೊಸ ರುಚಿಯತ್ತ ಜನರ ಚಿತ್ತ ಹರಿಯುತ್ತಿದೆ. ಇದಕ್ಕೆ ಸಾಕ್ಷಿ ಪಾನಿಪುರಿ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ದೇಶದ ಮೊದಲ ಪಾನಿಪುರಿ ಯಂತ್ರ ಪರಿಚಯಿಸಲಾಗಿತ್ತು. ಅದನ್ನು ಬೆಂಗಳೂರಿಗರಿಗೆ ಯಾಕೆ ಪರಿಚಯಿಸಬಾರದು ಎಂದುಕೊಂಡ ನಾಗೇಂದ್ರ ಎಂಬುವರು ರುಚಿಕರ ಮತ್ತು ಸ್ವಚ್ಛ, ಉತ್ತಮ ಗುಣಮಟ್ಟದ ಪಾನಿಪುರಿ ನೀಡುವ ಯಂತ್ರವನ್ನು ಇದೀಗ ಸಿಲಿಕಾನ್ ಸಿಟಿ ಮಂದಿಗೆ ಪರಿಚಯಿಸಿದ್ದಾರೆ.
ಇದರ ಕೆಲಸ ಹೇಗೆ?
ಈ ಅತ್ಯಾಧುನಿಕ ಯಂತ್ರ, ಪುರಿಗೆ ಪಾನಿ ಹಾಕುತ್ತದೆ. ಮೆಷಿನ್ನಲ್ಲಿ ಖಾರ, ಕಡಿಮೆ ಖಾರ, ಸ್ವೀಟ್ ಪಾನಿಗಳ ಆಯ್ಕೆ ಇವೆ. ಇಲ್ಲಿ ಐದು ಬಗೆಯ ಫ್ಲೇವರ್ ಗಳ ಪಾನಿಪುರಿ ಲಭ್ಯವಿದೆ. ಇದಕ್ಕೆ ಪಾನಿಗಳನ್ನು ಹಾಕಿಕೊಳ್ಳಬಹುದು. ಈ ಹೊಸ ಯಂತ್ರದಲ್ಲಿ, ನೀವು ನಿಮ್ಮ ಇಷ್ಟದ ಪಾನಿಪುರಿಯನ್ನು ಬೇಕಾದಷ್ಟು ಸವಿಯಬಹುದು.
ಇದೀಗ ಈ ಪಾನಿಪುರಿ ಮೆಶಿನ್ ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ವರ್ಲ್ಡ್ ಮಾಲ್ ಹಾಗೂ ಬಿನ್ನಿಪೇಟೆಯ ಇಟಿಎ ಮಾಲ್‌ನಲ್ಲಿವೆ. ಈ ಯಂತ್ರಕ್ಕೆ 6 ಲಕ್ಷ ರೂ. ವೆಚ್ಚ ಆಗಿದೆಯಂತೆ. ಕಳೆದ ಜನವರಿಯಲ್ಲೇ ತಮ್ಮ ಕೆಲಸ ಆರಂಭಿಸಿರುವ ಈ ಯಂತ್ರ ಇದೀಗ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಹೀಗಾಗಿ, ಜನ ಹುಡುಕಿಕೊಂಡು ಬಂದು ಈ ಅಂಗಡಿಯಲ್ಲಿ ಪಾನಿಪುರಿ ಟೇಸ್ಟ್ ಮಾಡುತ್ತಿದ್ದಾರೆ.