ಬೆಂಗಳೂರು: ಯಶವಂತಪುರ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ ಏಕಾಂಗಿಯಲ್ಲ. ಅವರೊಂದಿಗೆ ಸಂಪೂರ್ಣ ಕಾಂಗ್ರೆಸ್ ಪಕ್ಷ ಇದೆ ಎಂದು ಕ್ಷೇತ್ರದ ಉಸ್ತುವಾರಿ ಶಾಸಕ ಎಂ.ಕೃಷ್ಣಪ್ಪ ಹೇಳಿದರು.
ಯಶವಂತಪುರ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು, ಪ್ರಚಾರದಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳದ ಎಂ.ಕೃಷ್ಣಪ್ಪ, ಇಂದು ನಾಗರಾಜ್ ಪರ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕೈ ಅಭ್ಯರ್ಥಿ ನಾಗರಾಜ್ ಏಕಾಂಗಿಯಲ್ಲ. ಕಾಂಗ್ರೆಸ್ನ ಎಲ್ಲರೂ ಅವರ ಜೊತೆ ಇದ್ದಾರೆ. ನಾವು ಮನೆ ಮನೆಗೆ ಹೋಗಿ ಪ್ರಚಾರ ಮಾಡುತ್ತಿದ್ದೇವೆ. ಈ ಮೊದಲು ಇಲ್ಲಿ ಶಾಸಕರಾಗಿದ್ದವರು ಪಕ್ಷ ಬಿಟ್ಟು ಹೋಗಿ ಮೋಸ ಮಾಡಿರುವುದು ಇಲ್ಲಿನ ಜನರಿಗೆ ಮತ್ತು ಕಾಂಗ್ರೆಸ್ ನಾಯಕರಿಗೆ ಅಸಮಾಧಾನ ತಂದಿದೆ. ಹಾಗಾಗಿ ಈ ಬಾರಿ ಮತದಾರರು ನಿಶ್ಚಿತವಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಅಭ್ಯರ್ಥಿ ಪಾಳ್ಯ ನಾಗರಾಜ್, ಡಿಸೆಂಬರ್ ಒಂದರಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಸೋಮಶೇಖರ್ ಅವರು ನಮ್ಮ ಕಾರ್ಯಕರ್ತರಿಗೆ ಬೆದರಿಕೆಯೊಡ್ಡಿರುವುದು ನಿಜ. ಆದರೆ ಯಾವ ಕಾರ್ಯಕರ್ತರು ಧೈರ್ಯವಾಗಿ ಮುಂದೆ ಬಂದು ತಮಗೆ ಬೆದರಿಕೆಯೊಡ್ಡಿದ್ದನ್ನು ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ ಎಂದರು.
ಅದನ್ನು ಹಾಗೆಯೇ ಸಾಬೀತುಪಡಿಸಲು ಸಾಧ್ಯವಿಲ್ಲ. ನಾವು ಬಿಜೆಪಿಯವರಂತೆ ಅಬ್ಬರದ ಪ್ರಚಾರ ಮಾಡುತ್ತಿಲ್ಲ. ಆದರೆ ಮನೆ ಮನೆಗೆ ಹೋಗುತ್ತಿದ್ದೇವೆ. ಸೋಮಶೇಖರ್ ಕೇವಲ ರಸ್ತೆಗಳಲ್ಲಿ ನಿಂತು ಪ್ರಚಾರ ಮಾಡುತ್ತಿದ್ದಾರೆ. ಮನೆ ಮನೆಗೆ ಹೋದರೆ ಜನ ಕಲ್ಲು ಹೊಡೆದು ಕಳಿಸುತ್ತಾರೆ ಎಂಬ ಭಯ ಇದೆ. ನಾವಂತೂ ಗೆಲ್ಲುವ ವಿಶ್ವಾಸದಲ್ಲಿದ್ದೇವೆ ಎಂದರು.