ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಸಿದ್ರಾಮುಲ್ಲ ಖಾನ್ ಹೇಳಿಕೆ ಸರಿಯಲ್ಲ. ನಾವು ಕೂಡ ಪ್ರತಿಭಟನೆ ಪ್ರಾರಂಭ ಮಾಡಿದರೆ ಸಿ ಟಿ ರವಿ ಹೊರಗೆ ಬರಲು ಸಾಧ್ಯವಾಗುವುದಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ರಾಜಕೀಯವಾಗಿ ಸಿ.ಟಿ. ರವಿ ಮಾತನಾಡಿದ್ದಾರೆ. ಆದರೆ ಈ ತರಹದ ಮಾತುಗಳು ಬೇಡ. ಸಿದ್ದರಾಮೇಶ್ವರ ಎಂಬುದರಿಂದ ಸಿದ್ದರಾಮಯ್ಯ ಹೆಸರು ಬಂದಿದೆ. ದೇವರ ಹೆಸರಿನಿಂದ ಇವರಿಗೆ ಹೆಸರು ಬಂದಿದೆ. ಇದನ್ನು ಇಲ್ಲಿಗೇ ನಿಲ್ಲಿಸಿದರೆ ಸರಿ, ಇಲ್ಲದಿದ್ದರೆ ಮತ್ತಷ್ಟು ವಿಕೋಪಕ್ಕೆ ಹೋಗಬಹುದು ಎಂದಿದ್ದಾರೆ.
ಬಿಜೆಪಿಯವರದ್ದು ಯಾವಾಗಲೂ ಅಭ್ಯಾಸ ಆಗಿಬಿಟ್ಟಿದೆ. ಭ್ರಷ್ಟಾಚಾರ ಅಂದಾಗ ಕಾಂಗ್ರೆಸ್ನಲ್ಲಿ ಇರಲಿಲ್ವಾ ಅಂತಾರೆ. ಪ್ರತಿಪಕ್ಷದಲ್ಲಿ ಇದ್ದವರು ಅವರು, ಆಗ ಯಾಕೆ ಸುಮ್ಮನೆ ಇದ್ದರು. ಎಂಟೂವರೆ ವರ್ಷ ಅವರಿಗೆ ಯಾವುದೇ ಭ್ರಷ್ಟಾಚಾರ ಇರಲಿಲ್ಲ. ರೌಡಿಗಳ ವಿಷಯ ಬಂದಾಗ ರೌಡಿಗಳನ್ನು ಸೇರಿಸಿಕೊಂಡಿದ್ದಾರೆ. ರೌಡಿಗಳಿಗೆ ಟಿಕೆಟ್ ಕೊಡುವ ಅಂಡರ್ ಸ್ಟ್ಯಾಂಡಿಂಗ್ ಆಗಿತ್ತು ಬಿಜೆಪಿಯಲ್ಲಿ ಎಂಬ ಮಾಹಿತಿ ಇದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೇಲೆ ಆರೋಪಗಳಿದ್ದರೆ ತನಿಖೆ ಆಗುತ್ತದೆ. ನಲಪಾಡ್ ಮೇಲೆ ರೌಡಿಶೀಟ್ ಇದೆಯಾ? ಅವರ ಪ್ರಕರಣವೂ ತನಿಖೆ ಆಗುತ್ತದೆ. ಅಧ್ಯಕ್ಷರ ಬಗ್ಗೆ ಕೊತ್ವಾಲ್ ಶಿಷ್ಯ ಅನ್ನೋದು ಸರಿಯಲ್ಲ ಎಂದು ಹೇಳಿದರು.
ಬೆಳಗಾವಿ ಗಡಿ ವಿಚಾರ ಕುರಿತು ಮಾತನಾಡಿ, ಸಿಎಂ ಸರ್ವ ಪಕ್ಷಸಭೆ ಕರೆಯಬೇಕಿತ್ತು, ಆದ್ರೆ ಕರೆದಿಲ್ಲ. ಮಹಾರಾಷ್ಟ್ರ ರಾಜಕೀಯ ಪರಿಸ್ಥಿತಿ ಸರಿಯಿಲ್ಲ. ಹೀಗಾಗಿ ಅದನ್ನು ಡೈವರ್ಟ್ ಮಾಡಲು ಗಡಿ ಕ್ಯಾತೆ ತೆಗೆಯಲಾಗುತ್ತಿದೆ. ಜತ್, ಹಕ್ಕಲಕೋಟ, ಸೊಲ್ಲಾಪುರದಲ್ಲಿ ಎಲ್ಲಾ ಕನ್ನಡಿಗರಿದ್ದಾರೆ. ಇವೆಲ್ಲವೂ ಕರ್ನಾಟಕಕ್ಕೆ ಸೇರಬೇಕಾಗುತ್ತದೆ ಎಂದರು.
ಇದನ್ನೂ ಓದಿ: ನಾನಾಗಲಿ, ಜಾರಕಿಹೊಳಿ ಆಗಲಿ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಮಹೇಶ್ ಕುಮಟಳ್ಳಿ