ಆನೇಕಲ್: ಕೇಂದ್ರದ ಹೊಸ ನಿಯಮದ ಪ್ರಕಾರ ಪ್ರತಿ ಲಾರಿಗೆ 20-30 ಸಾವಿರ ದಂಡ ಕಟ್ಟಿಸಿಕೊಳ್ಳುವ ಮೂಲಕ ಆರ್ಟಿಒ ಅಧಿಕಾರಿಗಳು ಹಾಗೂ ಅತ್ತಿಬೆಲೆ ಪೊಲೀಸರು ಲಾರಿ ಮಾಲೀಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಲಾರಿ ಮಾಲೀಕರಿಂದ ಹೆಚ್ಚು ದಂಡ ಕಟ್ಟಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿ ಕರ್ನಾಟಕ ಟಿಪ್ಪರ್ ಅಸೋಷಿಯೇಷನ್ ಸಂಘದ ಅಧ್ಯಕ್ಷ ವಿ.ಜಿ.ಗೋಪಾಲರೆಡ್ಡಿ ನೇತೃತ್ವದಲ್ಲಿ ಅತ್ತಿಬೆಲೆ ಆರ್ಟಿಒ ತಪಾಸಣಾ ಮುಖ್ಯ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಕಳೆದ 20-25 ವರ್ಷಗಳಿಂದ ಯಾವುದೇ ಸಮಸ್ಯೆಯಿಲ್ಲದೆ ಸರಕು ಸಾಗಾಣೆ ಸಾಗಿಸುತ್ತಿದ್ದೆವು. ಆದರೆ ಕೆಲ ದಿನಗಳಿಂದ ಆರ್ಟಿಒ ಅಧಿಕಾರಿಗಳು ಲಾರಿಗಳನ್ನು ಅಡ್ಡಗಟ್ಟಿ, ಕಾನೂನುಗಳನ್ನು ಮುಂದಿಟ್ಟುಕೊಂಡು ಲಾರಿಗೆ ತುಂಬಿದ ಸರಕಿನ ತೂಕ, ಗಾತ್ರದ ನೆಪದಲ್ಲಿ ವಿಪರೀತ ದಂಡ ಹೇರಿ ಕಿರುಕುಳ ನೀಡುತ್ತಿದ್ದಾರೆ ಎಂದು ಫೆಡರೇಷನ್ ಆಫ್ ಕರ್ನಾಟಕ ಲಾರಿ ಓನರ್ಸ್ ಅಸೋಷಿಯೇಷನ್ ಅಧ್ಯಕ್ಷ ಚೆನ್ನಾರೆಡ್ಡಿ ಆಕ್ರೋಶ ವ್ಯಕ್ತಡಿಸಿದರು.
ನಮ್ಮ ಲಾರಿಗಳಿಗೆ ಇನ್ಸೂರೆನ್ಸ್ ಕಟ್ಟಿರುತ್ತೇವೆ. ಲಾರಿ ಚಾಲಕರ ಬಳಿ ಚಾಲನಾ ಪರವಾನಗಿ ಇರುತ್ತೆ. ರಸ್ತೆ ತೆರಿಗೆ ಕಟ್ಟುತ್ತೇವೆ. ಆದರೂ ಲಾರಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸಾಮಾಗ್ರಿಗಳನ್ನು ತುಂಬಲಾಗಿದೆ ಎಂಬ ನೆಪವೊಡ್ಡಿ 25ರಿಂದ 30 ಸಾವಿರ ರೂ. ದಂಡ ವಸೂಲಿ ಮಾಡುತ್ತಿದ್ದಾರೆ. ಅಲ್ಲದೆ ಅಧಿಕಾರಿಗಳು ಲಾರಿಗಳನ್ನು ತಡೆದು ಅತಿ ಹೆಚ್ಚು ದಂಡ ಹಾಕುವುದಲ್ಲದೆ ವಾರಗಟ್ಟಲೆ ಬಂಧನದಲ್ಲಿಡುವುದು ಸರಿಯಲ್ಲ. ಚಾಲಕರು, ಕ್ಲೀನರ್ಗಳನ್ನು ವಶಕ್ಕೆ ಪಡೆದು ಮೂಲ ಸೌಲಭ್ಯಗಳೂ ಇಲ್ಲದೆ ಕಿರುಕುಳ ನೀಡಲಾಗುತ್ತಿದೆ ಎಂದು ಕೆಟಿಒಎ ಉಪಾಧ್ಯಕ್ಷ ಮುನಿರೆಡ್ಡಿ ದೂರಿದ್ದಾರೆ.
ಅಧಿಕಾರಿ ಪ್ರತಿಕ್ರಿಯೆ: ಈ ವೇಳೆ ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಲ್ಕರ್ ಪ್ರತಿಕ್ರಿಯಿಸಿ, 2019ರಲ್ಲಿ ಕೆಲವೊಂದು ಕಾನೂನುಗಳು ತಿದ್ದುಪಡಿಯಾಗಿವೆ. ಆ ಪ್ರಕಾರವಾಗಿ ನಿಯಮ ಪಾಲಿಸುತ್ತಿದ್ದೇವೆ. ಕಾನೂನಿನ ಬಗ್ಗೆ ಲಾರಿ ಮಾಲೀಕರಿಗೆ ಈಗಾಗಲೇ ವರ್ಷದಿಂದ ಅರಿವು ಮೂಡಿಸುತ್ತಿದ್ದೇವೆ. ಆದಷ್ಟು ಲಾರಿ ಮಾಲೀಕರಿಗೆ ಸಮಸ್ಯೆಯಾಗದಂತೆ ಕಾರ್ಯಾಚರಣೆ ನಡೆಸುತ್ತಿದ್ದೇವೆಂದು ಸ್ಪಷ್ಟನೆ ನೀಡಿದರು.