ಬೆಂಗಳೂರು: ಮಧ್ಯಾಹ್ನದ ವಿರಾಮದ ನಂತರ ಆರಂಭವಾದ ವಿಧಾನ ಪರಿಷತ್ ಕಲಾಪದ ಆರಂಭದಲ್ಲಿ ಮುಂದುವರೆದ ವಿಧೇಯಕಗಳ ಮಂಡನೆಯನ್ನು ಸಭಾಪತಿ ಕೈಗೆತ್ತಿಕೊಂಡರು.
ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆ ನಡೆದ ಬಳಿಕ ಪರಿಷತ್ನಲ್ಲಿ ಮಂಡನೆಯಾದ ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2020 ಹಾಗೂ ಕರ್ನಾಟಕ ಪುರಸಭೆಗಳು ಹಾಗೂ ಕೆಲವು ಇತರೆ ಕಾನೂನು ತಿದ್ದುಪಡಿ ವಿಧೇಯಕ 2020, ಕರ್ನಾಟಕ ಬಹಿರಂಗ ಸ್ಥಳಗಳ (ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ) (ತಿದ್ದುಪಡಿ) ವಿಧೇಯಕ 2020ಗಳಿಗೆ ಪರಿಷತ್ನಲ್ಲಿ ಅಂಗೀಕಾರ ಪಡೆಯಲಾಯಿತು.
ಮೂರೂ ವಿಧೇಯಕಗಳನ್ನು ಮುಖ್ಯಮಂತ್ರಿಗಳ ಪರವಾಗಿ ಸಚಿವ ಮಾಧುಸ್ವಾಮಿ ಕಲಾಪದಲ್ಲಿ ಮಂಡಿಸಿದರು. ಸಭೆಯಲ್ಲಿ ಅಂಗೀಕಾರವಾದ ಕರ್ನಾಟಕ ನಾವೀನ್ಯತಾ ಪ್ರಾಧಿಕಾರ ತಿದ್ದುಪಡಿ ವಿಧೇಯಕ 2020ಅನ್ನು ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್ ಮಂಡಿಸಿ ವಿವರ ನೀಡಿದರು. ಕರ್ನಾಟಕ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕವನ್ನು ಅಶ್ವತ್ಥ್ ನಾರಾಯಣ್ ಮಂಡಿಸಿದರು. ವಿಧೇಯಕ ಅಂಗೀಕೃತವಾಯಿತು.
ಕೊರೊನಾ ಚರ್ಚೆ ಬಳಿಕ ನಿಯಮ 68ರಡಿಯಲ್ಲಿ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ಈಗ ಕೈಗೊಂಡೊರುವ ಕ್ರಮಗಳ ಕುರಿತು ವಿವರ ನೀಡುವಂತೆ ಕೋರಿದರು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೈಗೊಂಡ ವೆಂಟಿಲೇಟರ್ ವ್ಯವಸ್ಥೆ, ತುರ್ತು ವೈದ್ಯಕೀಯ ಸೇವೆಗೆ ಏನೇನು ಸಿದ್ಧತೆ ಕೈಗೊಂಡಿದ್ದೀರಿ. ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ವೆಂಟಿಲೇಟರ್ ವ್ಯವಸ್ಥೆ ಯಾವ ರೀತಿಯಲ್ಲಿದೆ. ರಾಜ್ಯದ ರಾಜಧಾನಿಯಲ್ಲಿ ಎಷ್ಟು ವೆಂಟಿಲೇಟರ್ ಇದೆ. ವೈದ್ಯರ ಸಂಖ್ಯೆ ಎಷ್ಟಿದೆ ಎಂದು ಕೇಳಿದರು.
ಇದೇ ವೇಳೆ ಪರಿಷತ್ನ ಎಲ್ಲಾ ಸದಸ್ಯರಿಗೆ, ಅಧಿಕಾರಿಗಳಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಮಾಸ್ಕ್ ವಿತರಿಸಲಾಯಿತು. ಕಲಾಪ ಶೀಘ್ರವೇ ಮುಕ್ತಾಯವಾಗುವ ಹಿನ್ನೆಲೆ ಸಿಎಎ, ಎನ್ಆರ್ಸಿ, ಎನ್ಪಿಆರ್ ಮೇಲಿನ ಚರ್ಚೆ ನಡೆಸಬೇಕೆಂದು ಕಾಂಗ್ರೆಸ್ ಪಕ್ಷದ ಎಂ.ನಾರಾಯಣಸ್ವಾಮಿ ತಿಳಿಸಿದರು. ಪ್ರತಿಪಕ್ಷ ಸದಸ್ಯರು ಇದಕ್ಕೆ ಬೆಂಬಲ ನೀಡಿದಾಗ ಸಭಾಪತಿ ಮಾತನಾಡಿ, ಇದಕ್ಕೆ ಅವಕಾಶ ಇಲ್ಲ. ವಿತ್ತೀಯ ಚರ್ಚೆ ನಡೆಯಲಿ ಎಂದರು. ಆಗ ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ನಡುವೆ ತೀವ್ರ ವಾಗ್ವಾದ ನಡೆಯಿತು. ಸಭಾಪತಿಗಳು ವಿತ್ತೀಯ ಕಲಾಪದ ಮೇಲೆ ಚರ್ಚೆಗೆ ಅವಕಾಶ ಮಾಡಿಕೊಟ್ಟರು.