ಬೆಂಗಳೂರು: ವಿದ್ಯುತ್ ಸಂಪರ್ಕ ನೀಡಲು 13 ಲಕ್ಷ ರೂಪಾಯಿ ಲಂಚದ ಬೇಡಿಕೆಯಿಟ್ಟಿದ್ದ ಬೆಸ್ಕಾಂ ಎಇಇ ಧನಂಜಯ ಎಂಬವರನ್ನು ಲೋಕಾಯುಕ್ತರು ಬಂಧಿಸಿದ್ದಾರೆ. ಜಯನಗರದ ಕಟ್ಟಡವೊಂದಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಕಾಂಟ್ರಾಕ್ಟರ್ಗಳಾದ ಶಂಕರ್ ಮತ್ತು ಗುರುದತ್ ಎಂಬವರು ಅರ್ಜಿ ಸಲ್ಲಿಸಿದ್ದರು. ವಿದ್ಯುತ್ ಸಂಪರ್ಕ ನೀಡಲು ಧನಂಜಯ ಖಾಸಗಿ ವ್ಯಕ್ತಿ ಸಯ್ಯದ್ ನಿಜಾಮ್ ಎಂಬಾತನನ್ನು ಮುಂದಿಟ್ಟುಕೊಂಡು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಇಂದು ಲೋಕಾಯುಕ್ತ ಇನ್ಸ್ಪೆಕ್ಟರ್ ವೆಂಕಟೇಶ ಮತ್ತು ವಿಜಯಕೃಷ್ಣ ತಂಡ ಟ್ರ್ಯಾಪ್ ಕಾರ್ಯಾಚರಣೆ ನಡೆಸಿದೆ. ಮುಂಗಡವಾಗಿ 3.5 ಲಕ್ಷ ರೂ ಲಂಚ ಸ್ವೀಕರಿಸುವಾಗ ಎಇಇ ಲೋಕಾಯುಕ್ತ ಬಲೆಗೆ ಬಿದ್ದರು.
ಲೋಕಾಯುಕ್ತ ಬಲೆಗೆ ಕಾನ್ಸ್ಟೇಬಲ್: ಆರೋಪಿಗೆ ಸಹಾಯ ಮಾಡುವುದಾಗಿ ಹೇಳಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಹೆಡ್ ಕಾನ್ಸ್ಟೇಬಲ್ 50 ಸಾವಿರ ರೂ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದ ಘಟನೆ ಇತ್ತೀಚೆಗೆ ಬೆಂಗಳೂರಲ್ಲಿ ನಡೆದಿತ್ತು. ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ (ಸಿಇಎನ್) ಪೊಲೀಸ್ ಠಾಣೆಯ ಮಹೇಶ್ ಎಂಬವರು ಲೋಕಾ ಬಲೆಗೆ ಬಿದ್ದಿದ್ದರು.
ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಬೆಂಗಳೂರಿನ ಮಂಜೇಗೌಡ ಎಂಬವರಿಂದ ಮಹೇಶ್ 2.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲಿಗೆ 75 ಸಾವಿರ ರೂ. ಪಡೆದಿದ್ದ ಮಹೇಶ್ ಉಳಿದ ಹಣ ನೀಡಲು ಹೇಳಿದ್ದರು. ಹೆಚ್ಚಿನ ಹಣ ನೀಡಲು ಸಾಧ್ಯವಾಗದಿದ್ದಾಗ ಮಂಜೇಗೌಡ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಪೊಲೀಸರು, ದೂರುದಾರನಿಂದ 50,000 ರೂ. ಪಡೆಯುತ್ತಿದ್ದಾಗ ಮಹೇಶ್ ಹಾಗೂ ಆತನ ಪರವಾಗಿ ಹಣ ಸ್ವೀಕರಿಸುತ್ತಿದ್ದ ರಮೇಶ್ ಎಂಬಿಬ್ಬರನ್ನು ಬಂಧಿಸಿದ್ದರು.
ಲೋಕಾ ಬಲೆಗೆ ರೆವಿನ್ಯೂ ಅಧಿಕಾರಿ: ರಿಯಲ್ ಎಸ್ಟೇಟ್ ಕಂಪೆನಿಯ ಖಾತಾ ವಿಚಾರಕ್ಕೆೆ ಸಂಬಂಧಿಸಿದಂತೆ ಲಂಚಕ್ಕೆೆ ಬೇಡಿಕೆಯಿಟ್ಟಿದ್ದ ಬಿಬಿಎಂಪಿ ಕಂದಾಯ ನಿರೀಕ್ಷಕ (ರೆವಿನ್ಯೂ ಇನ್‌ಸ್ಪೆೆಕ್ಟರ್) ಹಾಗೂ ಮಧ್ಯವರ್ತಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಕೆಲದಿನಗಳ ಹಿಂದೆ ನಡೆದಿತ್ತು. ಕಂದಾಯ ನಿರೀಕ್ಷಕನ ಮನೆಯಲ್ಲಿ ದೊಡ್ಡ ಮೊತ್ತದ ಅಘೋಷಿತ ಆಸ್ತಿ ಪತ್ತೆಯಾಗಿತ್ತು. ಬೆಂಗಳೂರು ಮಹದೇವಪುರ ವಲಯದ ರೆವಿನ್ಯೂ ಇನ್‌ಸ್ಪೆೆಕ್ಟರ್ ನಟರಾಜ್, ಮಧ್ಯವರ್ತಿ ಪವನ್ರನ್ನು ಬಂಧಿಸಲಾಗಿತ್ತು.
ಖಾಸಗಿ ರಿಯಲ್ ಎಸ್ಟೇಟ್ ಕಂಪನಿ ಮಾಲೀಕ 79 ಫ್ಲ್ಯಾಟ್‌ಗಳ ಖಾತಾಗಾಗಿ ಅರ್ಜಿ ಸಲ್ಲಿಸಿದ್ದರು. ಆರೋಪಿ ನಟರಾಜ್ ಪ್ರತಿ ಖಾತಾಗೆ 10 ಸಾವಿರದಂತೆ ಒಟ್ಟು 7.90 ಲಕ್ಷ ರೂ. ಲಂಚಕ್ಕೆೆ ಬೇಡಿಕೆಯಿಟ್ಟಿದ್ದರು. ಈ ಬಗ್ಗೆ ಮಂಜುನಾಥ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಬಿಬಿಎಂಪಿ ಕಚೇರಿಯಲ್ಲೇ ದಾಳಿ ನಡೆಸಿ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ನಟರಾಜ್ ಹಾಗೂ ಪವನ್‌ನನ್ನು ಬಂಧಿಸಿದ್ದರು.
ಇದನ್ನೂ ಓದಿ: Lokayukta Raid: ಆರೋಗ್ಯ ಇಲಾಖೆಯ ನಿವೃತ್ತ ಸ್ಟೋರ್‌ಕೀಪರ್ ಬಳಿ ₹10 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆ!