ಬೆಂಗಳೂರು : ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಲಂಚ ಮತ್ತು ನಿಧಾನಗತಿಯ ಕೆಲಸದ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಉಪಲೋಕಾಯುಕ್ತ ಕೆಎನ್ ಫಣೀಂದ್ರ ದಿಢೀರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿರುವ ಎಲ್ಲಾ ಇಲಾಖೆಗಳ ದಾಖಲೆ ಪರಿಶೀಲನೆ ನಡೆಸಿದ್ದು, ದಾಖಲೆ ಪರಿಶೀಲಿಸುವ ಸಮಯದಲ್ಲಿ ಸಿಬ್ಬಂದಿಗಳಿಗೆ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿ ಮಾಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಕಚೇರಿಯಲ್ಲಿ ಖಾತಾ, ಭೂ ಪರಿವರ್ತನೆ ಮಾಡಲು ಹಣ ಬೇಡಿಕೆ ಹಾಗೂ ಸಿಬ್ಬಂದಿ ಕೊರತೆ ಬಗ್ಗೆಯೂ ದೂರು ಬಂದಿದ್ದರಿಂದ ಉಪಲೋಕಾಯುಕ್ತ ಕೆಎನ್ ಫಣೀಂದ್ರ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿದರು. ಜೊತೆಗೆ ಈ ಬಗ್ಗೆ ತಹಶೀಲ್ದಾರ್ ರಿಂದ ಮಾಹಿತಿ ಪಡೆದರು.ಇನ್ನೂ ಮುಂದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಸೂಚಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಲೋಕಾಯುಕ್ತ ಕೆಎನ್ ಫಣೀಂದ್ರ ಅವರು, ಪ್ರತಿ ದಿನ ನಮಗೆ ಎಲ್ಲ ತಾಲೂಕು ಕಚೇರಿಗಳಲ್ಲಿ, ಅಸಿಸ್ಟಂಟ್ ಕಮಿಷನರ್ ಕಚೇರಿ, ಹಾಗೂ ಡೆಪ್ಯುಟಿ ಕಮಿಷನರ್ ಕಚೇರಿಗಳಲ್ಲಿ ನಿಧಾನಗತಿಯಲ್ಲಿ ಕೆಲಸಗಳಾಗುತ್ತಿವೆ. ಕಡತಗಳು ಬೇಗನೆ ಮುಂದಕ್ಕೆ ಹೋಗುವುದಿಲ್ಲ. ಈ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ಒಂಬತ್ತು ತಂಡಗಳೊಂದಿಗೆ ದಿಢೀರ್ ಕಚೇರಿಗಳಿಗೆ ಭೇಟಿ ನೀಡಿ ಎಲ್ಲಾ ಇಲಾಖೆಗಳ ಕಡತಗಳನ್ನು ಪರಿಶೀಲನೆ ನಡೆಸಿದ್ದೇವೆ. ಯಾವ ಯಾವ ಕಡತಗಳು ನಿಧಾನ ಆಗುತ್ತಿದೆ ಅದಕ್ಕೆ ಕಾರಣ ಏನು ಎಂದು ತಿಳಿದುಕೊಂಡು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ : ವಿಜಯಪುರದ ಸರ್ಕಾರಿ ಆಸ್ಪತ್ರೆ ಮೇಲೆ ಲೋಕಾಯುಕ್ತ ದಾಳಿ