ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಕೆ ಆರ್ ಪುರಂ ತಾಲೂಕು ಕಚೇರಿ ಸರ್ವೆ ಸೂಪರ್ವೈಸರ್ ಕೆ ಟಿ ಶ್ರೀನಿವಾಸ್ ಮೂರ್ತಿ ಅವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಕಲ್ಕೆರೆ ಬಳಿಯಿರುವ ಕೆ ಟಿ ಶ್ರೀನಿವಾಸ್ ನಿವಾಸ, ಹೆಣ್ಣೂರಿನಲ್ಲಿರುವ ಸಹೋದರಿ ನಿವಾಸ, ತುಮಕೂರಿನಲ್ಲಿರುವ ಸಹೋದರಿಯ ನಿವಾಸ, ಸೇರಿದಂತೆ ಸುಮಾರು 14 ಸ್ಥಳಗಳಲ್ಲಿ ಪರಿಶೀಲನೆ ಮುಂದುವರೆದಿದೆ.
ದಾಳಿ ವೇಳೆ ಕೆ ಟಿ ಶ್ರೀನಿವಾಸ್ ಅಂಧ್ರಳ್ಳಿಯಲ್ಲಿ ನಿವೇಶನ, ಅವರ ಪತ್ನಿ ರಾಯಪುರದಲ್ಲಿ ಭೋಗ್ಯಕ್ಕೆ ಪಡೆದಿರುವ ಜಮೀನು, ಪತ್ನಿ ಹಾಗೂ ಸಹೋದರಿಯ ಸಹಭಾಗಿತ್ವದಲ್ಲಿ ಹೊಂದಿರುವ ಹೋಟೆಲ್ ಮತ್ತು ಬೋರ್ಡಿಂಗ್ಸ್, 5ಕ್ಕೂ ಅಧಿಕ ಅಬಕಾರಿ ಲೈಸೆನ್ಸ್, ಹೆಣ್ಣೂರು ಗ್ರಾಮದಲ್ಲಿ 2 ಸಾವಿರ ಚದರ್ ಮೀಟರ್ ವಿಸ್ತೀರ್ಣದ ಒಂದು ನಿವೇಶನ, ನಿರ್ಮಾಣ ಹಂತದ ಕಟ್ಟಡ, ಕೊತ್ತನೂರು ಗ್ರಾಮದಲ್ಲಿ ನಿವೇಶನ, ಲಕ್ಕೇನಹಳ್ಳಿಯಲ್ಲಿ ಒಂದು ಹೊಸ ಮನೆ, 5ಕ್ಕೂ ಅಧಿಕ ಅಬಕಾರಿ ಲೈಸೆನ್ಸ್ ಹೊಂದಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
9 ಜಿಲ್ಲೆಯ 14 ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು: ಆಗಸ್ಟ್ 17 ರಂದು ರಾಜ್ಯದ 9 ಜಿಲ್ಲೆಯ 14 ಸರ್ಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಸೇರಿ 45ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ನಗದು ಹಾಗೂ ಆಸ್ತಿ-ಪಾಸ್ತಿ ಪತ್ತೆ ಮಾಡಿದ್ದರು. ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ರಾಜ್ಯದ 9 ಜಿಲ್ಲೆಯ 14 ಸರ್ಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಸೇರಿ 45ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳು ಪರಿಶೀಲನೆ ನಡೆಸಿದ್ದರು.
ಬೆಂಗಳೂರಿನ ಮಹದೇವಪುರ ವಲಯದ ಕಂದಾಯ ನಿರೀಕ್ಷಕ ಎಸ್.ನಟರಾಜ್ ಅವರಿಗೆ ಸೇರಿದ 4 ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಬೆಂಗಳೂರಿನ ಎಂ.ಎಸ್.ಬಿಲ್ಡಿಂಗ್ ಕಚೇರಿಯ ಗ್ರೇಡ್-1 ತಹಶೀಲ್ದಾರ್ ಆಗಿರುವ ಶಿವರಾಜು ಅವರಿಗೆ ಸೇರಿದ 12 ಸ್ಥಳಗಳ ಮೇಲೆ, ಬೆಂಗಳೂರಿನ ಚಿಕ್ಕಜಾಲ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಪತಿ ಅವರಿಗೆ ಸೇರಿದ 6 ಸ್ಥಳಗಳು, ಬಿಬಿಎಂಪಿ ಕಾರ್ಯನಿರ್ವಾಕ ಇಂಜಿನಿಯರ್ (ಇಇ) ಎಸ್.ಭಾರತಿ ಅವರಿಗೆ ಸೇರಿದ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ಮಾಡಲಾಗಿತ್ತು.
ಅಲ್ಲದೇ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕ ಕೆ.ಎನ್.ನಾಗರಾಜು ಮನೆ ಹಾಗೂ ಕಚೇರಿ, ಚಿತ್ರದುರ್ಗದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಕೆ.ಮಹೇಶ್ ಅವರಿಗೆ ಸೇರಿದ 3 ಸ್ಥಳಗಳು, ಕೊಡಗು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರಿಗೆ ಸೇರಿದ 6 ಸ್ಥಳಗಳು ಹಾಗೂ ಕೊಡಗಿನ ಹಾರಂಗಿ ಜಲಾಶಯದ ಅಧೀಕ್ಷಕ ಇಂಜಿನಿಯರ್ ಕೆ ಕೆ ರಘುಪತಿ ಅವರಿಗೆ ಸೇರಿದ 3 ಸ್ಥಳಗಳು, ಕೊಪ್ಪಳದ ನಿರ್ಮಿತಿ ಕೇಂದ್ರದಲ್ಲಿ ಕಚೇರಿ ವ್ಯವಸ್ಥಾಪಕ ಮಂಜುನಾಥ ಅವರಿಗೆ ಸೇರಿದ 3 ಸ್ಥಳಗಳು ಮತ್ತು ಬೀದರ್ ಜಿಲ್ಲೆಯ ಚಿಟಗುಪ್ಪ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ವಿಜಯಕುಮಾರ್‌ಗೆ ಸೇರಿದ 3 ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದರು.
ಇದನ್ನೂ ಓದಿ: ಸುಳ್ಯ: ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಲೋಕಾಯುಕ್ತ ಬಲೆಗೆ