ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಉಪನೋಂದಣಾಧಿಕಾರಿ ಕಚೇರಿಗಳ ಮೇಲೆ ಪರಿಶೀಲನೆ ವೇಳೆ, ಅಕ್ರಮ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಸಂಬಂಧ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಿಜಿಸ್ಟ್ರಾರ್, ಸಬ್ ರಿಜಿಸ್ಟ್ರಾರ್ಗಳಿಗೆ ಸ್ಪಷ್ಟನೆ ನೀಡುವಂತೆ ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ಆದೇಶಿಸಿದ್ದಾರೆ.
ಕಳೆದ ಜೂನ್ 22ರಂದು ಲೋಕಾಯುಕ್ತ ನ್ಯಾ. ಬಿ.ಎಸ್.ಪಾಟೀಲ್ ನೇತೃತ್ವದಲ್ಲಿ ಎಸ್ಪಿ ತಂಡ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗೆ ಒಳಪಡುವ 43 ಉಪನೋಂದಣಿ ಕಚೇರಿಗಳ ಮೇಲೆ ಏಕಕಾಲಕ್ಕೆ ತೆರಳಿ ಪರಿಶೀಲನೆ ನಡೆಸಿತ್ತು. ತಪಾಸಣೆ ವೇಳೆ ಅಕ್ರಮ ಎಸಗಿರುವುದು ಕಂಡುಬಂದಿತ್ತು. ಈ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ರಿಜಿಸ್ಟ್ರಾರ್, ಸಬ್ ರಿಜಿಸ್ಟ್ರಾರ್ಗಳಿಗೆ ಸೆಪ್ಟೆಂಬರ್ 9ರೊಳಗೆ ಉತ್ತರಿಸುವಂತೆ ಲೋಕಾಯುಕ್ತರು ಸೂಚಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆದಾಯ ಪ್ರಮಾಣಪತ್ರ ವಿಳಂಬ, ಅಕ್ರಮವಾಗಿ ಜಮೀನು ಪರಭಾರೆ, ನಕಲಿ ದಾಖಲೆ ಸೃಷ್ಟಿಸಿ ಜಮೀನು ಕಬಳಿಕೆ, ಖಾತಾ ಮಾಡಿಕೊಡಲು ಸಾರ್ವಜನಿಕರಿಂದ ಹೆಚ್ಚು ಹಣ ವಸೂಲಿ ಸೇರಿದಂತೆ ನಾನಾ ರೀತಿಯ ದೂರುಗಳ ಸರಮಾಲೆಯೇ ಲೋಕಾಯುಕ್ತಕ್ಕೆ ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಲೋಕಾಯುಕ್ತರು 40ಕ್ಕಿಂತ ಹೆಚ್ಚು ರಿಜಿಸ್ಟ್ರಾರ್ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ಸಾರಿಗೆ ನಿಗಮ ಪುನಶ್ಚೇತನ.. ಸಿಎಂಗೆ 131 ಪುಟಗಳ ಅಂತಿಮ ವರದಿ ಸಲ್ಲಿಸಿದ ಸಮಿತಿ
ಪರಿಶೀಲನೆ ವೇಳೆ ಸಾರ್ವಜನಿಕರಿಂದ ಮಧ್ಯವರ್ತಿಗಳು ಹಣ ಪಡೆದಿರುವುದು ಕಂಡುಬಂದಿದೆ. ಕೆಲಸ ಅವಧಿಯಲ್ಲಿ ಸಿಬ್ಬಂದಿ ಐಡಿ ಕಾರ್ಡ್ ಧರಿಸದಿರುವುದು, ಹಾಜರಾತಿ ಪುಸ್ತಕಕ್ಕೆ ಸಹಿ ಹಾಕದಿರುವುದು, ಶುಲ್ಕವಾಗಿ ಪಡೆದ ಹಣದ ಬಗ್ಗೆ ಸೂಕ್ತ ಲೆಕ್ಕಪತ್ರ ಇಲ್ಲದಿರುವುದು ಕಂಡುಬಂದಿದೆ. ಕಚೇರಿಗಳಲ್ಲಿ ಸಿಸಿಸಿವಿ ಅಳವಡಿಸದಿರುವುದು ಸೇರಿದಂತೆ ಹಲವು ಅಂಶಗಳ ಬಗ್ಗೆ ಉಲ್ಲೇಖಿಸಿರುವ ಲೋಕಾಯುಕ್ತರು ಸಂಬಂಧಿಸಿದ ಅಧಿಕಾರಿಗಳಿಗೆ ಉತ್ತರಿಸುವಂತೆ ಸೆಪ್ಟೆಂಬರ್ 9ರ ಗಡುವು ವಿಧಿಸಿ ಆದೇಶ ಹೊರಡಿಸಿದ್ದಾರೆ.