ಬೆಂಗಳೂರು: ಪ್ರಕರಣವೊಂದರಲ್ಲಿ ಆರೋಪಿಗೆ ಸಹಾಯ ಮಾಡುವುದಾಗಿ 50 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಒಬ್ಬರನ್ನು ಭಾನುವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಮನಗರದ ಸೈಬರ್ ಕ್ರೈಂ, ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ (ಸಿಇಎನ್) ಪೊಲೀಸ್ ಠಾಣೆಯ ಮಹೇಶ್ (43) ಎಂದು ಗುರುತಿಸಲಾಗಿದೆ. ಮಹೇಶ್ ಪರವಾಗಿ ಲಂಚ ಪಡೆಯುತ್ತಿದ್ದ ಆತನ ಸ್ನೇಹಿತನನ್ನು ಸಹ ಪೊಲೀಸರು ಬಂಧಿಸಿದ್ದಾರೆ.
2020ರಲ್ಲಿ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರಿನ ಮಂಜೇಗೌಡ ಎಂಬುವರಿಂದ ಮಹೇಶ್ 2.5 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈಗಾಗಲೇ 75 ಸಾವಿರ ರೂ. ಲಂಚ ಪಡೆದಿದ್ದ. ಹೆಚ್ಚಿನ ಹಣ ನೀಡಲು ಸಾಧ್ಯವಾಗದಿದ್ದಾಗ ಮಂಜೇಗೌಡ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಭಾನುವಾರ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಪೊಲೀಸರು, ಉತ್ತರಹಳ್ಳಿ ಬಳಿ ದೂರುದಾರನಿಂದ 50,000 ರೂ. ಗಳನ್ನು ಪಡೆಯುತ್ತಿದ್ದಾಗ ಮಹೇಶ್ ಹಾಗೂ ಆತನ ಪರವಾಗಿ ಹಣ ಸ್ವೀಕರಿಸುತ್ತಿದ್ದ ರಮೇಶ್ ಎಂಬಾತನನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ನಂತರ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೇಸಿಂಗ್ ಮಾಡಿ ಫುಡ್ ಇನ್ಸ್‌ಪೆಕ್ಟರ್ ಬಂಧಿಸಿದ್ದ ಲೋಕಾಯುಕ್ತ: ಆಹಾರೋತ್ಪನ್ನಗಳ ವ್ಯಾಪಾರ ಪರವಾನಗಿ ಪರಿಶೀಲನೆ ಮಾಡಿಕೊಡುವುದಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಫುಡ್ ಇನ್ಸ್‌ಪೆಕ್ಟರ್ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಆತನನ್ನು ವಶಕ್ಕೆ ಪಡೆದಿದ್ದ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಫುಡ್ ಇನ್ಸ್‌ಪೆಕ್ಟರ್ ಮಹಂತೇಗೌಡ ಬಿ ಕಡಬಾಳು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಅದರಲ್ಲಿ 43 ಸಾವಿರ ರೂಪಾಯಿ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದನು.
ರಂಗಧಾಮಯ್ಯ ಎಂಬವರು ಆಹಾರೋತ್ಪನ್ನಗಳ ಮಾರಾಟ ಪರವಾನಗಿ ಪರಿಶೀಲನೆಗಾಗಿ ಫುನ್ ಇನ್ಸ್‌ಪೆಕ್ಟರ್ ಅನ್ನು ಭೇಟಿಯಾಗಿದ್ದರು. ಈ ವೇಳೆ ಫುಡ್ ಇನ್ಸ್‌ಪೆಕ್ಟರ್ ಒಂದು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದನು. ಅದರಲ್ಲಿ ಹತ್ತು ಸಸಾವಿರ ರೂಗಳನ್ನು ಮುಂಗಡವಾಗಿಯೂ ಪಡೆದಿದ್ದನು. ಹೀಗಾಗಿ ರಂಗಧಾಮಯ್ಯ ಅವರು ಲೋಕಾಯುಕ್ತ ಮೊರೆ ಹೋಗಿದ್ದರು. ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದ ಲೋಕಾಯುಕ್ತ ತಂಡ ದಾಳಿ ಮಾಡಿದಾಗ, ಮಹಂತೇಗೌಡ ಬಿ ಕಡಬಾಳು ಲೋಕಾಯುಕ್ತ ಪೊಲೀಸರ ಮೇಲೆಯೇ ಕಾರು ನುಗ್ಗಿಸಲು ಯತ್ನಿಸಿದ್ದನು. 15 ಕಿ.ಮೀ ಬೆನ್ನಟ್ಟಿದ್ದ ಲೋಕಾಯುಕ್ತ ಪೊಲೀಸರು ಕೊನೆಗೆ ನೆಲಮಂಗಲದ ಸೊಂಡೆಕೊಪ್ಪ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಇದನ್ನೂ ಓದಿ: Lokayukta raid: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ದಾಳಿ.. 15 ಕಿ.ಮೀ ಚೇಸಿಂಗ್ ಮಾಡಿ ಫುಡ್ ಇನ್ಸ್‌ಪೆಕ್ಟರ್ ಬಂಧನ