ಬೆಂಗಳೂರು: ವಿದ್ಯುತ್ ಸಂಪರ್ಕ ನವೀಕರಣಗೊಳಿಸಲು 25 ಸಾವಿರ ರೂ ಲಂಚಕ್ಕೆ ಬೇಡಿಕೆಯಿಟ್ಟು 20 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂನ ಇಬ್ಬರು ಅಧಿಕಾರಿಗಳನ್ನ ಲೋಕಾಯುಕ್ತ ತಂಡ ಬಂಧಿಸಿದೆ. ಬೆಸ್ಕಾಂ ಸುಮನಹಳ್ಳಿ ಉಪ ವಲಯದ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಭಾರತಿ ಹಾಗೂ ಕಾಮಾಕ್ಷಿಪಾಳ್ಯದ ವಿದ್ಯುತ್ ಕಾರ್ಯಾಚರಣೆ ಮತ್ತು ನಿರ್ವಹಣೆ ಘಟಕದ ಅಸಿಸ್ಟೆಂಟ್ ಎಂಜಿನಿಯರ್ ಕನಲ್ ಕುಮಾರ್ ಎಂಬುವವರನ್ನ ರೆಡ್ ಹ್ಯಾಂಡಾಗಿ ಲೋಕಾಯುಕ್ತ ತಂಡ ಬಂಧಿಸಿದೆ.
ವಿದ್ಯುತ್ ಸಂಪರ್ಕವನ್ನ 30hp ಯಿಂದ 60hpಗೆ ನವೀಕರಣಗೊಳಿಸಲು ಅನಂತರಾಜು ಕೆ.ಎಂ ಎಂಬುವವರು ಬೆಸ್ಕಾಂಗೆ ಮನವಿ ಸಲ್ಲಿಸಿದ್ದರು. ನವೀಕರಣಗೊಳಿಸಲು 25 ಸಾವಿರ ರೂ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಅನಂತರಾಜು ದೂರು ನೀಡಿದ್ದರು. ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಡಿವೈಎಸ್ಪಿ ಪ್ರಕಾಶ್ ರೆಡ್ಡಿ ನೇತೃತ್ವದ ತಂಡ ದೂರುದಾರರಿಂದ 20 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದ ಆರೋಪಿತ ಅಧಿಕಾರಿಗಳನ್ನ ಬಂಧಿಸಿದೆ.
ಲೋಕಾಯುಕ್ತ ಬಲೆಗೆ ಬಿದ್ದ ಕಲಬುರಗಿ ಅಧಿಕಾರಿ: ಗೌರವಧನ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಕಲಬುರಗಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾಧಿಕಾರಿ ವೆಂಕಟೇಶ ದೇಶಪಾಂಡೆ ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶುಕ್ರವಾರ ಸಂಜೆ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣ ಬಳಿ ಇರುವ ಕಚೇರಿಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಖೆಡ್ಡಾಗೆ ಕೆಡವಿದ್ದಾರೆ. ಅಧಿಕಾರಿ ವೆಂಕಟೇಶ ದೇಶಪಾಂಡೆ, ಜೇವರ್ಗಿ ತಾಲೂಕಿನ ವಿವಿಧೋದ್ದೇಶ ಪುನರ್ವಸತಿ ಅಧಿಕಾರಿ ನಾನಾಗೌಡ ಹೊನ್ನಳ್ಳಿ, ಕಚೇರಿಯ ಎಫ್‌ಡಿಸಿ ಅಂಬರೇಶ ನಾಯಕ್ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಲಂಚಕ್ಕೆ ಬೇಡಿಕೆ ಇಟ್ಟ ಅಧಿಕಾರಿಗಳಿಗೆ ಎತ್ತು ಕೊಡಲು ಮುಂದಾದ ರೈತ! ಅನ್ನದಾತನ ಅಸಹಾಯಕತೆ!
ಗ್ರಾಮ ಕರಣಿಕನಿಗೆ ನಾಲ್ಕು ವರ್ಷ ಸಜೆ: ಅಕ್ರಮ ಸಕ್ರಮದ ಅರ್ಜಿ ವಿಲೇವಾರಿಗಾಗಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತಕ್ಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ, ಗ್ರಾಮಕರಣಿಕನ ಮೇಲಿನ ಆರೋಪ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅಪರಾಧಿಗೆ ನಾಲ್ಕು ವರ್ಷಗಳ ಸಾದಾ ಸಜೆ ಹಾಗೂ 70 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಇತ್ತೀಚೆಗೆ ಆದೇಶಿಸಿದೆ.
ಸುಳ್ಯದ ಮಂಡೆಕೋಲು ಗ್ರಾಮದ ಗ್ರಾಮಕರಣಿಕ ಎಸ್ ಮಹೇಶ್ ಶಿಕ್ಷೆಗೊಳಗಾದ ಅಪರಾಧಿ. ಎಸ್ ಮಹೇಶ್ ಅಕ್ರಮ ಸಕ್ರಮದ ಅರ್ಜಿಯ ವಿಲೇವಾರಿಗೆ ಮಂಡೆಕೋಲು ನಿವಾಸಿ ಗೋಪಾಲಕೃಷ್ಣ ಅವರಿಂದ 60 ಸಾವಿರ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. 2016ರ ಜೂನ್ 7 ರಂದು 45 ಸಾವಿರ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದರು. ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಮರಳುಗಾರಿಕೆ ಅಡ್ಡೆಗೆ ಲೋಕಾಯುಕ್ತ ದಾಳಿ: ಲಾರಿ ದೋಣಿ ಸೇರಿದಂತೆ 40 ಲಕ್ಷ ಮೌಲ್ಯದ ವಸ್ತುಗಳು ವಶಕ್ಕೆ