ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ತಮ್ಮ ಕಟ್ಟುನಿಟ್ಟಿನ ಕ್ರಮ ಹಾಗೂ ವಿನೂತನ ಪ್ರಯತ್ನಗಳ ಮೂಲಕ ಸುದ್ದಿಯಲ್ಲಿರುವ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇನ್ಮುಂದೆ ಆಗ್ನೇಯ ವಿಭಾಗದ ಇನ್ಸ್ಪೆಕ್ಟರ್ಸ್ ಹಾಗೂ ಎಸಿಪಿಗಳು ತಮ್ಮ ಮೊಬೈಲ್ ಫೋನ್‌ಗೆ ಬರುವ ಕರೆಗಳನ್ನ ಸ್ವೀಕರಿಸದೆ ಇರುವಂತಿಲ್ಲ. ಜತೆಗೆ ತಮ್ಮ ವಾಟ್ಸ್ ಆ್ಯಪ್ ಡಿಸ್‌ಪ್ಲೇ ಪಿಕ್ಚರ್ನಲ್ಲಿ ತಮ್ಮ ಫೋಟೊ ಹಾಕುವಂತಿಲ್ಲ. ಕರೆ ಸ್ವೀಕರಿಸದೆ ಇದ್ದಲ್ಲಿ ಇನ್ಸ್ಪೆಕ್ಟರ್ಸ್ ಹಾಗೂ ಎಸಿಪಿಗಳಿಗೆ ಸಂಕಷ್ಟ ಉಂಟಾಗಲಿದೆ. ವಾಟ್ಸ್ಆ್ಯಪ್ ಡಿಪಿಗೂ, ಫೋನ್ ಕರೆ ರಿಸೀವ್ ಮಾಡದೆ ಇರುವುದಕ್ಕೂ ಏನು ಸಂಬಂಧ ಅಂತೀರಾ? ಕಾರಣ ಇಲ್ಲಿದೆ ನೋಡಿ.
ಲೋಕಸ್ಪಂದನ: ಇನ್ನು ಮುಂದೆ ಆಗ್ನೇಯ ವಿಭಾಗದ ಇನ್ಸ್ಪೆಕ್ಟರ್ಸ್ ಹಾಗೂ ಎಸಿಪಿಗಳು ಲೋಕಸ್ಪಂದನ ಎಂಬ ಕ್ಯೂಆರ್ ಕೋಡ್ನ್ನು ತಮ್ಮ ವಾಟ್ಸ್ಆ್ಯಪ್ ಡಿಪಿಯಲ್ಲಿ ಹಾಕಬೇಕು. ತಮ್ಮ ವಿಭಾಗದ ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿ ಕುರಿತು ಮಾಹಿತಿ ಪಡೆಯಲು ಸಿದ್ಧಪಡಿಸಿರುವುದೇ ಈ ಲೋಕಸ್ಪಂದನ ವ್ಯವಸ್ಥೆ. ಪೊಲೀಸರ ಕುರಿತು ಸಾರ್ವಜನಿಕರು ಏನಾದರೂ ಮೆಚ್ಚುಗೆ ವ್ಯಕ್ತಪಡಿಸುವುದಿರಲಿ ಅಥವಾ ಆಕ್ಷೇಪ ವ್ಯಕ್ತಪಡಿಸುವುದಿರಲಿ ಲೋಕಸ್ಪಂದನ ವ್ಯವಸ್ಥೆಯ ಮೂಲಕ ಮಾಡಬಹುದಾಗಿದೆ.
ಸಾರ್ವಜನಿಕರು ಮಾಡಬೇಕಿರುವುದೇನು?: 'ಇನ್ಸ್ಪೆಕ್ಟರ್ಸ್ ಹಾಗೂ ಎಸಿಪಿಗಳು ಸಾರ್ವಜನಿಕರ ಫೋನ್ ಕರೆ ಸ್ವೀಕರಿಸದೇ ಇದ್ದರೆ ಸಾರ್ವಜನಿಕರು ಆ ಅಧಿಕಾರಿಯ ವಾಟ್ಸ್ಆ್ಯಪ್ ಡಿಪಿಯಲ್ಲಿಯಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಬಳಿಕ ಮೆಸೆಜ್ ವ್ಯವಸ್ಥೆ ಲಭ್ಯವಾಗಲಿದೆ. ಅಲ್ಲಿ ನಿಮ್ಮ ಅಧಿಕಾರಿ ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂದು ಮೆಸ್ಸೇಜ್ ರವಾನಿಸಿದರೆ ನೇರವಾಗಿ ಆ ಮೆಸ್ಸೇಜ್ ಡಿಸಿಪಿ ಸಿ.ಕೆ ಬಾಬಾರ ಮೊಬೈಲ್ ಫೋನಿಗೆ ತಲುಪಲಿದೆ'
ಇದರಿಂದಾಗಿ ಯಾವ ಅಧಿಕಾರಿ ಸಾರ್ವಜನಿಕರಿಗೆ ಸೂಕ್ತ ಸ್ಪಂದನೆ ಮಾಡುತ್ತಿಲ್ಲ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬಹುದು. ಈ ಕ್ಯೂ ಆರ್ ಕೋಡ್ ಮೂಲಕ ಪೊಲೀಸರು ಇನ್ನಷ್ಟು ಜನಸ್ನೇಹಿಯಾಗಲು ಸಾಧ್ಯವಾಗಲಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ. ಅಲ್ಲದೇ ಇಂದಿನಿಂದಲೇ ಈ ನೂತನ ವ್ಯವಸ್ಥೆ ಜಾರಿಗೊಳಿಸಿದ್ದಾರೆ. ಈ ಹೊಸ ಯೋಜನೆ ಎಷ್ಟು ಪರಿಣಾಮಕಾರಿಯಾಗಲಿದೆ ಎಂದು ಕಾದು ನೋಡಬೇಕಿದೆ.
ಅಪರಾಧಿಗಳ ಪತ್ತೆಗೆ ಪೋರ್ಟೇಬಲ್ ಸ್ಕ್ಯಾನರ್: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ವಿನೂತನ ಪ್ರಯೋಗ ಜಾರಿ ಮಾಡಲಾಗಿದೆ. ರಾತ್ರಿ ಗಸ್ತಿನಲ್ಲಿ ಅಪರಾಧಿಗಳ ಪತ್ತೆಗೆ ಪೋರ್ಟೇಬಲ್ ಸ್ಕ್ಯಾನರ್ ಬಳಕೆ ಆರಂಭಿಸಲಾಗಿದೆ. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ನಡೆಯಬಹುದಾದ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ನೂತನ ಎಂಸಿಸಿಟಿಎನ್ಎಸ್ ಪೋರ್ಟೇಬಲ್ ಸ್ಕ್ಯಾನರ್ ಬಳಕೆಯನ್ನು ಆರಂಭಿಸಲಾಗಿದ್ದು, ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ.
ಎಂಸಿಸಿಟಿಎನ್ಎಸ್ (MCCTNS- Mobile Crime and Criminal Tracking Network System) ನೂತನ ತಂತ್ರಜ್ಞಾನದ ಸ್ಕ್ಯಾನರ್ ಅನ್ನು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ಸ್ ಹಾಗೂ ಎಸಿಪಿಗಳು ರಾತ್ರಿ ಗಸ್ತು ಕರ್ತವ್ಯದ ವೇಳೆ ಬಳಸಬೇಕಿದೆ. ರಾತ್ರಿ ವೇಳೆ ತಿರುಗಾಡುವ ಅಪರಿಚಿತ ಹಾಗೂ ಸಂಶಯಾಸ್ಪದ ವ್ಯಕ್ತಿಗಳ ಅಪರಾಧ ಹಿನ್ನೆಲೆಯ ಬಗ್ಗೆ ಈ ಹಿಂದೆ ನಡೆಸುತ್ತಿದ್ದ ಮೌಖಿಕ ವಿಚಾರಣೆಯೊಂದಿಗೆ ಯಾವುದೇ ವ್ಯಕ್ತಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರೆ, ಆತನ ಬೆರಳಚ್ಚುಗಳನ್ನು ಈ ನೂತನ ತಂತ್ರಾಂಶದ ಮೂಲಕ ಪರಿಶೀಲನೆ ಮಾಡಿ ಅಪರಾಧ ಹಿನ್ನೆಲೆಗಳ ಮಾಹಿತಿಯನ್ನು ಕ್ಷಣ ಮಾತ್ರದಲ್ಲಿ ಪಡೆಯಬಹುದಾಗಿದೆ.
ಇದನ್ನೂ ಓದಿ: ದ.ಕ ಜಿಲ್ಲಾ ಪೊಲೀಸರಿಂದ ವಿನೂತನ ಪ್ರಯೋಗ; ಅಪರಾಧಿಗಳ ಪತ್ತೆಗೆ ಪೋರ್ಟೇಬಲ್ ಸ್ಕ್ಯಾನರ್ ಬಳಕೆ