ಬೆಂಗಳೂರು: ''ಹಲವು ವರ್ಷಗಳಿಂದ ಇತ್ಯರ್ಥ ಪಡಿಸಲಾಗದ ಪ್ರಕರಣಗಳಿಗೆ ಪರಿಹಾರ ಒದಗಿರುವ ಉದ್ದೇಶದಿಂದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಇದೇ ಶನಿವಾರ (ಡಿ.9ರಂದು) ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ.ಪಿ.ಎಸ್.ದಿನೇಶ್ ಕುಮಾರ್ ಹೇಳಿದರು.
ಡಿ.9ರಂದು ರಾಜ್ಯದ ಪ್ರತಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಅದಾಲತ್ ನಡೆಯಲಿದೆ. ಇದುವರೆಗೂ ರಾಜ್ಯದ ಜಿಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 19,93,799 ಬಾಕಿ ಪ್ರಕರಣಗಳ ಪೈಕಿ 2.60 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ. ಮುಖ್ಯವಾಗಿ ನ್ಯಾಯಾಲಯಗಳಲ್ಲಿ ಬಾಕಿಯಿರುವ ರಾಜಿ ಆಗಬಹುದಾದ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿಶೇಷವಾಗಿ ಮೋಟಾರ್ ಅಪಘಾತ ಪರಿಹಾರ ಸಂಬಂಧ 77 ಸಾವಿರ ಪ್ರಕರಣ ಬಾಕಿ ಉಳಿದಿದೆ. ಅದೇ ರೀತಿ ವಿಮೆ ಪರಿಹಾರ 33,903, ಭೂವಿವಾದ ಸಂಬಂಧ 46,807 ಹಾಗೂ 1.08 ಲಕ್ಷ ಕ್ರಿಮಿನಲ್ ಕೇಸ್ ಸೇರಿದಂತೆ ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ, ಬ್ಯಾಂಕ್ ಪ್ರಕರಣ, ಕೌಟುಂಬಿಕ ಪ್ರಕರಣ ಸಂಬಂಧಿದಂತೆ ಒಟ್ಟು 2.60 ಲಕ್ಷ ಪ್ರಕರಣಗಳಿಗೆ ಮುಕ್ತಿಗೊಳಿಸುವ ಗುರಿ ಹೊಂದಲಾಗಿದೆ.
''ಇದೇ ಶನಿವಾರ ಬೃಹತ್ ಲೋಕ ಆದಾಲತ್ ಹಮ್ಮಿಕೊಳ್ಳಲಾಗಿದೆ. ಬಾಕಿ ಇರುವ ಪ್ರಕರಣಗಳನ್ನ ಬಗೆಹರಿಸಲು ಅದಾಲತ್ ಸಾಕ್ಷಿಯಾಗಲಿದೆ. ನ್ಯಾಯಾಲಯದಲ್ಲಿರುವ ಎಷ್ಟೋ ಪ್ರಕರಣಗಳು ಅದಾಲತ್‌ನಲ್ಲಿ ಪರಸ್ಪರ ಇಬ್ಬರು ಕುಳಿತು ಸಮಸ್ಯೆ ಇತ್ಯರ್ಥ ಪಡಿಸಬಹುದು. ನ್ಯಾಯಾಲಯಗಳಲ್ಲಿ ಬಗೆಹರಿಯದ 19,93,799 ಪ್ರಕರಣಗಳಿವೆ. ಈ ಬಾರಿ ನಡೆಯಲಿರುವ ಲೋಕ ಅದಾಲತ್‌ನಲ್ಲಿ 2.60 ಲಕ್ಷ ಪ್ರಕರಣಗಳನ್ನು ಮುಕ್ತಿಕೊಡಿಸುವ ಉದ್ದೇಶ ಹೊಂದಲಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ವಕೀಲರ ಜೊತೆ ಚರ್ಚಿಸಲಾಗಿದೆ'' ಎಂದು ನ್ಯಾ.ದಿನೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇತ್ತೀಚೆಗೆ ನಡೆದಿದ್ದ ಲೋಕ ಅದಾಲತ್‌ನಲ್ಲಿ ಒಂದಾದ 13 ಜೋಡಿಗಳು: 13 ಜೋಡಿಗಳು ಚಿಕ್ಕ ವಿಚಾರಕ್ಕೆ ಜಗಳವಾಡಿ ವಿಚ್ಛೇದನಕ್ಕಾಗಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಅವರಿಗೆ ವಿಚ್ಛೇದನ ನೀಡದೇ ಈ ಜೋಡಿಗಳನ್ನು ಒಂದಾಗುವಂತೆ ಮಾಡಿತ್ತು. ದಾವಣಗೆರೆ ಜಿಲ್ಲಾ ಮುಖ್ಯ ನ್ಯಾಯಾಧೀಶೆ ರಾಜೇಶ್ವರಿ ಎನ್ ಹೆಗಡೆ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ನಲ್ಲಿ 13 ಜೋಡಿಗಳು ಹಾರ ಬದಲಾಯಿಸಿಕೊಂಡು ಸಿಹಿ ತಿನ್ನಿಸುವ ಮೂಲಕ ಮತ್ತೆ ಒಂದಾಗಿ ಸತಿಪತಿಗಳಾಗಿದ್ದಾರೆ. ಈ ಕ್ಷಣಕ್ಕೆ ದಾವಣಗೆರೆ ಜಿಲ್ಲಾ ನ್ಯಾಯಾಧೀಶರು, ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರ ಸಾಕ್ಷಿಯಾಗಿತ್ತು.
ಇದನ್ನೂ ಓದಿ: ಮುರಿದ ಮನಸುಗಳು ಮತ್ತೆ ಒಂದಾದವು..: ಲೋಕ ಅದಾಲತ್‌ನಲ್ಲಿ 29 ಜೋಡಿಗಳಿಗೆ ಹೊಸ ಬದುಕು