ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ನ್ನು ನಿಯಂತ್ರಿಸಲು, ದೇಶಾದ್ಯಂತ ಲಾಕ್ಡೌನ್ನ್ನು ಘೋಷಿಸಲಾಗಿದೆ. ಇದರಿಂದಾಗಿ ಆರ್ಥಿಕವಾಗಿ ದೇಶ ಸ್ಥಗಿತಗೊಂಡಿದ್ದು, ಏಪ್ರಿಲ್ 20 ರ ಬಳಿಕ ಕೆಲ ಸಡಿಲಿಕೆ ಕ್ರಮಗಳನ್ನು ದೇಶ ಅನುಸರಿಸುತ್ತಿದೆ. ಐಟಿ ಬಿಟಿ ಸಂಸ್ಥೆಗಳು ಹಾಗೂ ಅಗತ್ಯ ಕಾರ್ಖಾನೆಗಳು ಏಪ್ರಿಲ್ 20ರ ಬಳಿಕ 50% ನೌಕರರಿಂದ ಕಾರ್ಯ ನಿರ್ವಹಿಸಲು ಸಜ್ಜಾಗಿವೆ. ಹಾಗಾದರೆ ಸಂಸ್ಥೆಗಳು ಹಾಗೂ ಕಾರ್ಖಾನೆಗಳು ಯಾವ ರೀತಿ ಕೊರೊನಾ ವೈರಸ್ನಿಂದ ದೂರವಿರಲು ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಸಂಪೂರ್ಣ ವಿವರಣೆ ಇಲ್ಲಿದೆ.
ಕೆಲಸ ಆರಂಭಕ್ಕೂ ಮುನ್ನ ಕಂಪನಿಗಳನ್ನು ಶುಚಿಗೊಳಿಸಬೇಕು
ಕೆಲಸ ಪ್ರಾರಂಭವಾಗುವ ಮೊದಲು ಸಂಸ್ಥೆಗಳಲ್ಲಿ ಶುಚಿತ್ವ ಕಾರ್ಯ ನಡೆಯಬೇಕಿದೆ. ಸ್ಯಾನಿಟೈಸರ್, ಸೋಪುಗಳು ಹಾಗೂ ಇನ್ನಿತರ ಅಗತ್ಯ ಶುಚಿತ್ವದ ಉಪಕರಣಗಳು ಕಚೇರಿಗಳಲ್ಲಿ ಇಡಬೇಕು. ಇನ್ನೂ ಮುಖ್ಯವಾಗಿ ಏಪ್ರಿಲ್ 20ಕ್ಕೆ ಸಂಸ್ಥೆಯ ಎಲ್ಲಾ ಕಚೇರಿಗಳು ಸ್ಯಾನಿಟಾಯ್ಸ್ ಮಾಡಿ, ಕೀಬೋರ್ಡ್ ಮೌಸ್ ಹಾಗೂ ಇನ್ನಿತರೆ ಉಪಕರಣಗಳನ್ನು ಕಾಲಕಾಲಕ್ಕೆ ಶುಚಿಗೊಳಿಸಬೇಕು.
ಶೇಕಡಾ 50 ರಷ್ಟು ಕಾರ್ಯಪಡೆ
ಕೊರೊನಾ ಸೋಂಕಿನಿಂದ ದೂರವಿರಲು ಸಾಮಾಜಿಕ ಅಂತರ ಕಾಪಾಡಬೇಕಿದೆ. ಇದರ ಜೊತೆಗೆ ಆರ್ಥಿಕ ಚಟುವಟಿಕೆಗಳು ನಡೆಯಬೇಕಿದೆ. ಹೀಗಾಗಿ ಒಂದು ಸಂಸ್ಥೆಯಲ್ಲಿ ಕೇವಲ ಶೇ.50 ರಷ್ಟು ಕಾರ್ಯ ಪಡೆಯಿಂದ ಪಾಳಿಯಂತೆ ಕಾರ್ಯ ನಿರ್ವಹಿಸಬೇಕಿದೆ. ಅಂದರೆ ಒಂದು ಸಂಸ್ಥೆಯಲ್ಲಿ ಒಂದು ಶಿಫ್ಟ್ನಲ್ಲಿ 100 ನೌಕರರು ಕೆಲಸ ಮಾಡುವ ಬದಲು 50 ನೌಕರರು ಕೆಲಸ ಮಾಡಬೇಕಿದೆ.
ಆರೋಗ್ಯ ಸೇತು ಇರಬೇಕು
ಕೇಂದ್ರ ಸರ್ಕಾರ ಕೋವಿಡ್ 19 ಟ್ರ್ಯಾಕಿಂಗ್ ಮಾಡುವ ಹಿನ್ನೆಲೆಯಲ್ಲಿ, ಆರೋಗ್ಯ ಸೇತು ಎಂಬ ಆ್ಯಪ್ ಬಿಡುಗಡೆ ಮಾಡಿದೆ. ಇದು ವ್ಯಕ್ತಿಯಿರುವ ಜಾಗ ಕೊರೊನಾ ವೈರಸ್ನಿಂದ ಎಷ್ಟು ಸುರಕ್ಷಿತ ಎಂಬುದನ್ನು ನಿಖರವಾಗಿ ಮಾಹಿತಿ ನೀಡುತ್ತದೆ. ಸರ್ಕಾರದ ಆದೇಶದಂತೆ ಸಂಸ್ಥೆಗಳು ಶೇಕಡಾ 50ರಷ್ಟು ಕಾರ್ಯ ಪಡೆಯನ್ನು ಬಳಸಿಕೊಂಡು ಕೆಲಸ ಪ್ರಾರಂಭಿಸಬಹುದು. ಸಂಸ್ಥೆಗೆ ಬರುವ ನೌಕರರ ಮೊಬೈಲ್ನಲ್ಲಿ ಕಡ್ಡಾಯವಾಗಿ ಆರೋಗ್ಯ ಸೇತು ಇರಬೇಕು. ಇದರ ಆಧಾರದ ಮೇಲೆ ಆ ನೌಕರ ಕಚೇರಿಗೆ ಬರುವುದು ಬೇಡ ಎಂಬುದನ್ನು ನಿರ್ಧರಿಸಬಹುದು. ಹೀಗಾಗಿ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಆರೋಗ್ಯ ಸೇತು ಆ್ಯಪ್ ಕಡ್ಡಾಯಗೊಳಿಸುವ ಚಿಂತನೆ ನಡೆಸಿವೆ ಎಂದು ಮೂಲಗಳು ತಿಳಿಸುತ್ತಿವೆ.
ಪ್ರತಿನಿತ್ಯ ಆರೋಗ್ಯ ತಪಾಸಣೆ
ಪ್ರತಿನಿತ್ಯ ನೌಕರರು ಕಚೇರಿಗೆ ಬರುವ ಮುನ್ನ ಜ್ವರದ ಪರೀಕ್ಷೆಯನ್ನು ಥರ್ಮಲ್ ಸ್ಕ್ಯಾನಿಂಗ್ ಮುಖಾಂತರ ಮಾಡಿಕೊಳ್ಳಬಹುದು. ಹಾಗೂ ಕೊರೊನಾ ವೈರಸ್ ಲಕ್ಷಣಗಳು ಕಂಡ ಕೂಡಲೇ ನಿಗದಿತ ಆಸ್ಪತ್ರೆಗೆ ಕಳಿಸಬೇಕು ಎಂಬ ಸೂಚನೆಗಳು ಈಗಾಗಲೇ ಐಟಿ ಬಿಟಿ ಸಂಸ್ಥೆಯ ಪ್ರಮುಖರಿಗೆ ಸೂಚಿಸಲಾಗಿದೆ.
ನೌಕರರ ಓಡಾಟಕ್ಕೆ ಸರ್ಕಾರಿ ಬಸ್ ಉಪಯೋಗ
ಏಪ್ರಿಲ್ 20ರ ನಂತರ ಟ್ಯಾಕ್ಸಿ ಸಂಪರ್ಕ ಇರುವುದಿಲ್ಲ. ಹೀಗಾಗಿ ಖಾಸಗಿ ಸಂಸ್ಥೆಗಳು ನೌಕರರ ಓಡಾಟಕ್ಕೆ ಒಪ್ಪಂದದ ಮೇರೆಗೆ ಬಿಎಂಟಿಸಿ ಬಸ್ಗಳ ಉಪಯೋಗ ಪಡೆದುಕೊಳ್ಳುವ ವಿಚಾರವಾಗಿ ಈಗಾಗಲೇ ಡಿಸಿಎಂ ಅಶ್ವತ್ಥ್ ನಾರಾಯಣ ಬಳಿ ಹಂಚಿಕೊಂಡಿದ್ದಾರೆ. ಹಾಗೂ ಇದಕ್ಕೆ ಸಮ್ಮತಿ ಸಹ ಸಿಕ್ಕಿದೆ.
ಪಾಸ್ ಅಗತ್ಯವಿಲ್ಲ
ಏಪ್ರಿಲ್ 20ರ ನಂತರ ಯಾವುದೇ ಪಾಸ್ ಅಗತ್ಯವಿಲ್ಲ ಎಂದು ಈಗಾಗಲೇ ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಖಾಸಗಿ ಸಂಸ್ಥೆಯ ನೌಕರರು ತಮ್ಮ ಕಚೇರಿಗೆ ಹೋಗಬೇಕಾದರೆ ಸಂಸ್ಥೆಯ ಗುರುತಿನ ಚೀಟಿ ಇದ್ದರೆ ಸಾಕು, ಪಾಸ್ ಅಗತ್ಯವಿಲ್ಲ. ಅಗತ್ಯ ಸೇವೆಗಳು ಹೊರತುಪಡಿಸಿ ಬೇರೆ ಚಿತ್ರ ಮಂದಿರಗಳು ಕ್ರೀಡಾಂಗಣ ಹಾಗೂ ಸಾರ್ವಜನಿಕ ಸಮಾವೇಶ ಇರುವುದಿಲ್ಲ. ಹೀಗಾಗಿ ಅನಗತ್ಯ ಓಡಾಟ ಆಗುವುದಿಲ್ಲ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ. ಇವು ಸರ್ಕಾರ ಹಾಗೂ ಖಾಸಗಿ ಸಂಸ್ಥೆಯ ಪ್ರಮುಖರ ಜೊತೆ ನಡೆಸಲಾದ ಚರ್ಚೆ. ಇನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏಪ್ರಿಲ್ 20ರಂದು ಮತ್ತೊಂದು ಸುತ್ತಿನ ಚರ್ಚೆಯನ್ನು ನಡೆಸಿ ಇನ್ನು ಕೆಲ ಕ್ರಮಗಳನ್ನು ಹೇಳಲಿದ್ದಾರೆ.