ಬೆಂಗಳೂರು: ಸಾಮಾಜಿಕ ಅಂತರ ಪಾಲನೆ ಮಾಡಿ ಕೊರೊನಾ ಸೋಂಕಿನಿಂದ ದೂರವಾಗಿ.. ಇದು ಎಲ್ಲ ಕಡೆ ಕೇಳಿ ಬರುತ್ತಿರುವ ಕಾಮನ್ ಸ್ಲೋಗನ್.. ಆದ್ರೆ ಆಳುವ ಪಕ್ಷದ ಕೆಲ ನಾಯಕರಿಗೆ ಮಾತ್ರ ಇದು ಗೊತ್ತೆ ಇಲ್ಲ, ಅಂತರವೂ ಇಲ್ಲ ಮಾಸ್ಕೂ ಬೇಕಿಲ್ಲ ಅಂತ ಹೊರಟಿದ್ದಾರೆ.
ಹೌದು, ಲಾಕ್ಡೌನ್ ನಿಯಮ ಪಾಲಿಸಿ ರಾಜ್ಯದ ಜನರಿಗೆ ಮಾದರಿಯಾಗಬೇಕಾದ ಮಂತ್ರಿಗಳಿಂದಲೇ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆ ಮುಂದುವರೆದಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಜನರಿಗೂ ಮಾದರಿಯಾಗುವ ಬದಲು ತಮ್ಮ ಲಘು ವರ್ತನೆಯಿಂದ ಜನತೆಯಲ್ಲಿ ಜಾಗೃತಿ ಕಡಿಮೆಯಾಗುವಂತೆ ಮಾಡಲು ಹೊರಟಿದ್ದಾರೆ.
ಕೇಂದ್ರ ಸರ್ಕಾರ ಮೇ 31 ರವರೆಗೆ ಲಾಕ್ಡೌನ್ ಮುಂದುವರೆಸಿ ಆದೇಶ ಹೊರಡಿಸಿದೆ. ಅದರ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪತ್ರಿಕಾಗೋಷ್ಠಿ ನಡೆಸಿ ರಾಜ್ಯದಲ್ಲಿ ಯಾವುದಕ್ಕೆಲ್ಲ ಅವಕಾಶ, ಲಾಕ್ಡೌನ್ 4.0 ಹೇಗಿರಲಿದೆ ಜನತೆ ಯಾವ ರೀತಿ ನಿಯಮ ಪಾಲಿಸಬೇಕು ಎಂದು ಪ್ರಕಟಿಸಿದರು. ಆದರೆ, ಜೊತೆಯಲ್ಲೇ ಇದ್ದ ಸಚಿವರು ಇದಕ್ಕೆ ವಿರುದ್ಧವಾಗಿ ವರ್ತಿಸಿದ್ದು, ಸಚಹವರಲ್ಕಿನ ಗಂಭೀರತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಸಿಎಂ ಸುದ್ದಿಗೋಷ್ಠಿ ನಡೆಸುತ್ತಿದ್ದರೆ ಬಲಭಾಗದಲ್ಲಿ ಕುಳಿತಿದ್ದ ಸಚಿವರಾದ ನಾರಾಯಣಗೌಡ ಮತ್ತು ಕೋಟಾ ಶ್ರೀನಿವಾಸ ಪೂಜಾರಿ ಆಪ್ತ ಸಮಾಲೋಚನೆಯಲ್ಲಿ ತೊಡಗಿದ್ದರು. ಸಾಮಾಜಿಕ ಅಂತರ, ಮಾಸ್ಕ್ ಗೊಡವೆ ಇಲ್ಲದೇ ಪಿಸುಮಾತು ನಡೆಸಿದರು.
ಇತ್ತ ಸಿಎಂ ಎಡಭಾಗದಲ್ಲಿ ಕುಳಿತಿದ್ದ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಕೂಡ ಪಿಸುಮಾತಿನ ಲಹರಿಯಲ್ಲಿ ತೊಡಗಿದರೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಚಿವರಿಬ್ಬರ ಮಾತುಗಳನ್ನು ಆಲಿಸಲು ಕಿವಿಯೊಡ್ಡಿದ್ದರು. ಮೂವರು ಮಂತ್ರಿಗಳು ಗುಂಪುಗೂಡಿ ಮಾತನಾಡುತ್ತಿದ್ದರು. ಇದರಲ್ಲಿ ಸಾಮಾಜಿಕ ಅಂತರ ಇರಲಿ ಕನಿಷ್ಠ ಅಂತರವೂ ಇರಲಿಲ್ಲ, ಮಾರ್ಗಸೂಚಿ ಪ್ರಕಟಿಸುವ ವೇಳೆಯಲ್ಲಿಯೂ ಕೂಡ ಸಚಿವರಿಂದಲೇ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆ ಕಂಡುಬಂದಿತು.
ಇನ್ನು ಈ ಸಚಿವರ ಪಕ್ಕದಲ್ಲೇ ಇದ್ದ ಸಚಿವರಾದ ಬೈರತಿ ಬಸವರಾಜ್ ಹಾಗು ಎಸ್.ಟಿ ಸೋಮಶೇಖರ್ ಕೂಡ ಶಾಸಕ ನಂದೀಶ ರೆಡ್ಡಿ ಜೊತೆಗೂಡಿ ಹರಟೆಯಲ್ಲಿ ತೊಡಗಿದ್ದರು ಸಿಎಂ ಸುದ್ದಿಗೋಷ್ಠಿ ಎನ್ನುವುದನ್ನೂ ಮರೆತು ಮಾರ್ಗಸೂಚಿಯನ್ನೂ ಉಲ್ಲಂಘಿಸಿ ಮಾತುಕತೆಯಲ್ಲಿ ತೊಡಗಿದ್ದರು.
ಸುದ್ದಿಗೋಷ್ಠಿಗೆ ಸಾಮಾಜಿಕ ಅಂತರದ ಪ್ರಕಾರವೇ ಆಸನಗಳ ವ್ಯವಸ್ಥೆ ಮಾಡಿದ್ದರೂ ಸಚಿವರ ಆಸನಗಳ ನಡುವಿನ ಅಂತರವನ್ನು ಕಡಿಮೆಮಾಡಿಕೊಂಡರು. ಜನತೆಗೆ ಸಾಮಾಜಿಕ ಅಂತರದ ಪಾಠ ಮಾಡಬೇಕಾದ ಸಚಿವರೇ ಈ ರೀತಿಯಾಗಿ ಬಹಿರಂಗವಾಗಿಯೇ ಸಾಮಾಜಿಕ ಅಂತರದ ನಿಯಮವನ್ನು ಉಲ್ಲಂಘಿಸಿದರೆ ಜನರು ಹೇಗೆ ನಿಯಮ ಪಾಲಿಸುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ.
ಈ ಹಿಂದೆಯೂ ಲಾಕ್ಡೌನ್ ಆರಂಭದ ಸಮಯದಲ್ಲಿ ಸಚಿವರು ತಮ್ಮ ತಮ್ಮ ಇಲಾಖೆಯ ಅಧಿಕಾರಿಗಳ ಸಭೆ ನಡೆಸುವಾಗಲೂ ಸಾಮಾಜಿಕ ಅಂತರ ನಿಯಮ ಪಾಲನೆ ಮಾಡುತ್ತಿರಲಿಲ್ಲ ಲಾಕ್ಡೌನ್ ಈಗ 4.0 ಆದರೂ ಸಾಮಾಜಿಕ ಅಂತರದ ಬಗ್ಗೆ ಸಚಿವರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಂಪುಟ ಸಹೋದ್ಯೋಗಿಗಳಿಗೆ ಇಲ್ವಾ ಸಾಮಾಜಿಕ ಅಂತರದ ಕಳಕಳಿ ಎನ್ನುವ ಪ್ರಶ್ನೆ ಮೂಡಿಸಿದೆ.