ಆನೇಕಲ್: ಮೆಟ್ರೋಗಾಗಿ ಹೊಸೂರು ರಸ್ತೆ ಗಾರೆಬಾವಿಪಾಳ್ಯದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಸ್ವಾಧೀನಕ್ಕೆ ವಿರೋಧ ವ್ಯಕ್ತಡಿಸಿ, ಸ್ಥಳೀಯರು ದೇವಸ್ಥಾನದ ಎದುರು ಪ್ರತಿಭಟನೆ ನಡೆಸಿದರು.
ಸಿಲ್ಕ್ ಬೋರ್ಡ್ ನಿಂದ ಹೊಸೂರು ರಸ್ತೆ ಮೂಲಕ ಹಾದು ಹೋಗುವ ಬೊಮ್ಮಸಂದ್ರವರೆಗಿನ ಎರಡನೇ ಹಂತದ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿದೆ. ದೇವಸ್ಥಾನವು ಮೆಟ್ರೋ ಲೈನಿನ ಕೆಳಭಾಗದಲ್ಲಿ ಬರುವುದರಿಂದ ಸ್ವಾಧೀನಕ್ಕೆ ಮೆಟ್ರೋ ಮುಂದಾಗಿತ್ತು. ಗ್ರಾಮಸ್ಥರು ದೇವಸ್ಥಾನ ಉಳಿಸಿಕೊಡುವಂತೆ ಮೆಟ್ರೋ ನಿಗಮಕ್ಕೆ ಮನವಿ ಮಾಡಿದ್ದರು. ಅಧಿಕಾರಿಗಳು ಪರಿಶೀಲಿಸುವುದಾಗಿ ಭರವಸೆ ನೀಡಿ, ಏಕಾಏಕಿ ದೇವಸ್ಥಾನ ಸ್ವಾಧೀನಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ಭಕ್ತಾಧಿಗಳೊಂದಿಗೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಮೆಟ್ರೋಗಾಗಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯನ್ನು ಬಳಕೆ ಮಾಡಿರುವುದರಿಂದ ಒಪ್ಪಂದದಂತೆ 30 ಅಡಿಯ ಪರ್ಯಾಯ ಸರ್ವಿಸ್ ರಸ್ತೆ ನಿರ್ಮಿಸಿಕೊಡಬೇಕಿದೆ. ಆದರೆ ರಸ್ತೆ ನಿರ್ಮಾಣಕ್ಕೆ ದೇವಸ್ಥಾನ ಅಡ್ಡ ಬರುವುದರಿಂದ, ದೇವಸ್ಥಾನ ಸ್ವಾಧೀನಕ್ಕೆ ಮೆಟ್ರೋ ಮುಂದಾಗಿತ್ತು ಎಂದು ಹೇಳಲಾಗಿದೆ. ಇದಕ್ಕಾಗಿ ಪಕ್ಕದಲ್ಲೇ ದೇವಸ್ಥಾನ ನಿರ್ಮಿಸಿಕೊಳ್ಳಲು 18 ಚದರ ಮೀಟರ್ ಅಳತೆಯ ಜಾಗವನ್ನು ಕಾಯ್ದಿರಿಸಲಾಗಿದೆ. ಆದರೆ, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
‘ದೇವಸ್ಥಾನದ ಗರ್ಭಗುಡಿಯನ್ನು ಸ್ಥಳಾಂತರ ಮಾಡುವುದರಿಂದ ದಿಕ್ಕುಗಳು ಬದಲಾಗುತ್ತವೆ, ಸನಾತನ ಸಂಸ್ಕೃತಿಯಲ್ಲಿ ಇದಕ್ಕೆ ಅವಕಾಶವಿಲ್ಲ, ಆದ್ದರಿಂದ ದೇವಸ್ಥಾನವನ್ನು ಸರ್ಕಲ್ ಆಗಿ ಮಾಡಿ ‘ಯು’ ಆಕಾರದಲ್ಲಿ ರಸ್ತೆ ನಿರ್ಮಿಸುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ, ಈ ಮೊದಲು ನಮ್ಮ ಪ್ರಸ್ತಾಪಕ್ಕೆ ಮೌಖಿಕವಾಗಿ ಒಪ್ಪಿಗೆ ನೀಡಿದ್ದ ಮೆಟ್ರೋ ನಿಗಮ, ಇದೀಗ ಸ್ವಾದೀನಕ್ಕೆ ಮುಂದಾಗಿದೆ, ಇದು ಸರಿಯಲ್ಲ ಎನ್ನುತ್ತಾರೆ ಅರ್ಚಕ ವಿಠಲ್.
ಮೆಟ್ರೋ ನಿಗಮವು ದೇವಸ್ಥಾನ ಟ್ರಸ್ಟ್ ನ ಪ್ರಸ್ತಾಪವನ್ನು ಪತ್ರ ಮುಖೇನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕಳುಹಿಸಿ ಅಭಿಪ್ರಾಯ ಕೇಳಲಾಗಿತ್ತು. ಆದರೆ, ಹೆದ್ದಾರಿ ಪ್ರಾಧಿಕಾರಿವು ಸಂಚಾರ ದಟ್ಟಣೆ, ಅಪಘಾತ ಹೆಚ್ಚಾಗುವ ಸಾಧ್ಯತೆಯ ಕಾರಣಗಳನ್ನು ಮುಂದುಮಾಡಿ ಈ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಹೀಗಾಗಿ ಮೆಟ್ರೋ ನಿಗಮ ದೇವಸ್ಥಾನ ಸ್ವಾಧೀನಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.