ಬೆಂಗಳೂರು: ವೈಜ್ಞಾನಿಕವಾಗಿ ಸರ್ವೇ ನಡೆಸದೆ ಹಾಗೂ ನೋಟಿಸ್ ಸಹ ನೀಡದೆ ಪ್ರಭಾವಿಗಳ ಜಮೀನು ಉಳಿಸಲು ಬಡವರ ಮನೆಗಳನ್ನು ಒಡೆಯಲು ಬಿಬಿಎಂಪಿ ಮುಂದಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಸತತ ಮಳೆಯಿಂದ ಮುಳುಗುವಂತಹ ಪರಿಸ್ಥಿತಿಗೆ ತಲುಪಿರುವ ರಾಜಧಾನಿಯನ್ನು ಉಳಿಸಲು ಪಣ ತೊಟ್ಟಿರುವ ಬಿಬಿಎಂಪಿ, ರಾಜಕಾಲುವೆ ವ್ಯಾಪ್ತಿಯ ಅಕ್ರಮ ಕಟ್ಟಡಗಳನ್ನು ಉರುಳಿಸಲು ಸೋಮವಾರದಿಂದ ಜೆಸಿಬಿಗಳ ಘರ್ಜನೆ ಆರಂಭಿಸಿದೆ.
ಮಾರತ್ತಹಳ್ಳಿ, ವರ್ತೂರು ಮುಖ್ಯ ರಸ್ತೆ, ಕಾಲುವೆ, ಚಲ್ಲಘಟ್ಟ, ಮಹದೇವಪುರ, ಹೂಡಿ, ಬಸವಣ್ಣನಗರ, ಸೀತಾರಾಮಪಾಳ್ಯ, ಕೆಆರ್ ಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುರುತು ಮಾಡಿದ ಕಟ್ಟಡಗಳನ್ನು ಜೆಸಿಬಿಗಳ ಮೂಲಕ ಆಯಾ ವಲಯದ ಬಿಬಿಎಂಪಿ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಮಾಡಲಾಗುತ್ತಿದೆ.
ಮಾರತ್ತಹಳ್ಳಿಯ ಚಿನ್ನಪ್ಪ ಹಳ್ಳಿಯ ಎಇಸಿಎಸ್ ಲೇಔಟ್ ಮುಖ್ಯರಸ್ತೆಯಲ್ಲಿ ತಲೆ ಎತ್ತಿದ್ದ ಮೂರು ಅಂತಸ್ತಿನ ಕಟ್ಟಡವನ್ನು ಸತತ ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅರ್ಧ ತೆರವು ಮಾಡಲಾಯಿತು. ಈ ಕಟ್ಟಡದ ಮಾಲೀಕರು ಸಮೀಪದ ಕೆರೆಯ ಕಾಲುವೆ ಜಾಗವನ್ನು ಕಬಳಿಕೆ ಮಾಡಿರುವ ಆರೋಪ ಕೇಳಿಬಂದಿದೆ.
ಬಡವರ ಮನೆಯನ್ನು ಅಷ್ಟೇ ಓಡೆಯಲಾಗುತ್ತಿದೆ ಎನ್ನುವ ಆರೋಪ: ಅವೈಜ್ಞಾನಿಕವಾಗಿ ಸರ್ವೇ ಕಾರ್ಯ ಮಾಡಿ ಬಡವರ ಮನೆಗಳನ್ನು ಕೆಡವಲು ಬಿಬಿಎಂಪಿ ಮುಂದಾಗಿದೆ. ಪಕ್ಕದ ಅಪಾರ್ಟ್‌ಮೆಂಟ್ ಹಾಗೂ ಕಾಲೇಜು ಒತ್ತುವರಿ ಮಾಡಿಕೊಂಡಿರುವ ಜಾಗ ಸರ್ವೇ ಮಾಡದೇ ಪ್ರಭಾವಿಗಳ ಒತ್ತಡಕ್ಕೆ ಮಣಿದು ನಮಗೆ ಯಾವುದೇ ನೋಟಿಸ್ ನೀಡದೆ ಮನೆ ತೆರವು ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ. ಅಧಿಕಾರಿಗಳು ಪ್ರಭಾವಿಗಳ ಅಪಾರ್ಟ್‌ಮೆಂಟ್ ಹಾಗೂ ಕಾಲೇಜು ಒತ್ತುವರಿ ಆಗಿರುವ ಬಗ್ಗೆ ಕೆಂಪು ಗುರುತು ಮಾಡಿದ್ದರು. ಈಗ ಏಕಾಏಕಿ ಅವರ ಜಾಗಗಳನ್ನು ಒತ್ತುವರಿ ತೆರವು ಮಾಡದೇ ನಮ್ಮ ಮನೆಗಳನ್ನು ಒಡೆಯಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಲುವೆಯ ಮೇಲೆ ಕ್ರೀಡಾಂಗಣ: ಮಹದೇವಪುರದ ಬಸವನಗರದ ಗೋಪಾಲನ್ ಕಾಲೇಜಿನಿಂದ ರಾಜಕಾಲುವೆ ಒತ್ತುವರಿ ಆಗಿರುವ ಆರೋಪ ಇದ್ದು, ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮೈದಾನ ನಿರ್ಮಾಣ ಮಾಡಲಾಗಿದೆ. ಇದರಿಂದ ಸುತ್ತಲೂ ಜಾಗದಲ್ಲಿ ಪ್ರವಾಹ ಉಂಟಾಗಿದ್ದ ಹಿನ್ನೆಲೆ ಸದ್ಯ ಬಿಬಿಎಂಪಿ ಅಧಿಕಾರಿಗಳ ಪೊಲೀಸರು ಸಹಯೋಗದೊಂದಿಗೆ ಮಾರ್ಕಿಂಗ್ ಮಾಡಿದ್ದಾರೆ.
ಚಲ್ಲಘಟ್ಟದ ಏರ್ಪೋರ್ಟ್ ಕಟ್ಟಡ ತಡೆಗೋಡೆ ತೆರವು: ಚಲ್ಲಘಟ್ಟದ ಏರ್ಪೋರ್ಟ್ ಕಟ್ಟಡ ಎಂದೇ ಗುರುತಿಸಿಕೊಂಡಿರುವ ಕಟ್ಟಡ ತಡೆಗೋಡೆಯನ್ನು ಇಂದು ಸಂಪೂರ್ಣವಾಗಿ ತೆರವು ಮಾಡಲಾಗಿದೆ. ನೀರು ಸುಗಮವಾಗಿ ಹರಿಯುವ ಈ ಗೋಡೆಯನ್ನು ತೆರವು ಮಾಡಲಾಗಿದ್ದು, ಶೀಘ್ರದಲ್ಲೇ ಕಾಲುವೆ ಜಾಗ ವಿಸ್ತರಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಾರ್ಟ್ಮೆಂಟ್ ಗುರುತು: ಗೋಪಾಲನ್ ಇಂಟರ್ ನ್ಯಾಷನಲ್ ಕಾಲೇಜು ನಂತರ ಮತ್ತೊಂದು ಅಪಾರ್ಟ್ಮೆಂಟ್ನಿಂದ ರಾಜಕಾಲುವೆ ಒತ್ತುವರಿ ಬೆಳಕಿಗೆ ಬಂದಿದೆ. ಸೋಮವಾರ ಅಪಾರ್ಟ್ಮೆಂಟ್ ಭಾಗವನ್ನು ಗುರುತು ಮಾಡಿರುವ ಅಧಿಕಾರಿಗಳು. ಒಂದು ಭಾಗ ತೆರವು ಮಾಡುವುದು ಖಚಿತವಾಗಿದೆ.
ನೋಟಿಸ್ ಇಲ್ಲದೆ ತೆರವು: ಜೆಸಿಬಿ ಸಿಬ್ಬಂದಿ, ಪೊಲೀಸರು, ಸರ್ವೇ ಸಿಬ್ಬಂದಿಯನ್ನು ಜತೆಗೆ ಕರೆದುಕೊಂಡು ಸ್ಥಳದಲ್ಲೇ ಒತ್ತುವರಿ ಗುರುತಿಸಿ, ನಂತರ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಇನ್ನು ಮುಂದೆ ಯಾರಿಗೂ ನೋಟಿಸ್ ನೀಡುವುದಿಲ್ಲ, ಬದಲಿಗೆ ನಕ್ಷೆಯಂತೆ ರಾಜಕಾಲುವೆ ಒತ್ತುವರಿಯನ್ನು ಪತ್ತೆ ಮಾಡಿ ತೆರವು ಕಾರ್ಯಾಚರಣೆ ನಡೆಸಲಾಗುವುದು. ಆ ಮೂಲಕ ಮುಂಚೆಯೇ ಒತ್ತುವರಿದಾರರು ತೆರವು ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡುವ ಕ್ರಮಗಳನ್ನು ಕೈಗೊಳ್ಳಲು ಬಿಡುವುದಿಲ್ಲ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ ನಿರಂತವಾಗಿ ಸುರಿದ ಮಳೆಗೆ ಮಹದೇವಪುರದ 20ಕ್ಕೂ ಹೆಚ್ಚಿನ ಬಡಾವಣೆಗಳು ಜಲಾವೃತವಾಗಿದ್ದವು. ಅಲ್ಲಿದ್ದ ರಾಜಕಾಲುವೆಗಳ ಒತ್ತುವರಿಯಿಂದಲೇ ಪ್ರವಾಹ ಸೃಷ್ಟಿಯಾಗಿತ್ತು. ಅದಕ್ಕಾಗಿ ಕಾರ್ಯಾಚರಣೆ ಮಾಡಲಾಗಿದೆ. ಕಳೆದ ಸೆಪ್ಟೆಂಬರ್ 1ರಿಂದ 9ರವರೆಗೆ ಕೇವಲ ಖಾಲಿ ಜಾಗ, ಕಾಂಪೌಡ್‌ಗಳನ್ನು ಕೆಡವಿ ತೆರವು ಮಾಡಲಾಗಿತ್ತು. ಇಂದಿನಿಂದ ರಾಜಕಾಲುವೆ ಮೇಲೆ ನಿರ್ಮಿಸಲಾದ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿದ್ದೇವೆ ಎಂದಿದ್ದಾರೆ.
ಒಂದೇ ಕಡೆ 17 ಕಟ್ಟಡ ಗುರುತು: ಬಿಬಿಎಂಪಿ ಅಧಿಕಾರಿಗಳು ಮಹದೇವಪುರ ವ್ಯಾಪ್ತಿಯಲ್ಲಿ ಒಂದು ಭಾಗದಲ್ಲಿ 5 ಮತ್ತೊಂದು ಭಾಗದಲ್ಲಿ 12 ಕಟ್ಟಡಗಳನ್ನು ಗುರುತಿಸಿದ್ದು, ಇದೇ ವಾರದೊಳಗೆ ನಲಸಮಗೊಳ್ಳುವ ಸಾಧ್ಯತೆ ಇದೆ.
ಶ್ರೀಮಂತರಿಗೂ ನೋಟಿಸ್: ರೈನ್ ಬೋ ಲೇಔಟ್ ಬಿಲ್ಡರ್ಸ್ಗೆ ಕಂದಾಯ ಇಲಾಖೆಯ ತೆರವಿಗೆ ಸೂಚನೆ ನೀಡಿದ್ದು, ಈ ಸಂಬಂಧ 7 ದಿನಗಳ ಕಾಲಾವಕಾಶ ನೀಡಿದ್ದು ಪ್ರಮುಖ ಎರಡು ಷರತ್ತುಗಳನ್ನು ಹಾಕಿದೆ.
ಸರ್ವೇ ಪ್ರಕಾರ ಕಾಲುವೆ ಒತ್ತುವರಿ ಮಾಡಿಕೊಂಡಿರುವುದು ದೃಢವಾಗಿದೆ. ಹೀಗಾಗಿ ನೀವೇ 15 ವಿಲ್ಲಾಗಳನ್ನು ತೆರವು ಮಾಡುತ್ತೀರೋ ಅಥವಾ ನಾವು ಮಾಡಬೇಕೋ? ಒಂದು ವೇಳೆ ನೀವೂ ತೆರವು ಮಾಡದಿದ್ದರೇ ಡೆಮಾಲಿಷನ್ ಮಾಡಿದ ಖರ್ಚು, ವೆಚ್ಚವನ್ನು ನೀವೇ ಭರಿಸಬೇಕಾಗುತ್ತದೆ. ಈ ಬಗ್ಗೆ 7 ದಿನಗಳಲ್ಲಿ ಸಮಜಾಯಿಷಿ ನೀಡುವಂತೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಬಿಬಿಎಂಪಿಯಿಂದ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಜೆಸಿಬಿ ಆಪರೇಷನ್